ಸಹಕಾರ ಸಂಘಗಳಲ್ಲಿ ವ್ಯವಹಾರ ನಡೆಸಲು ಅವಕಾಶ ಕೋರಿ ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ

Update: 2016-11-22 15:50 GMT

ಉಡುಪಿ, ನ.22: ಸಹಕಾರಿ ಸಂಘಗಳಲ್ಲಿ ನಿರಂತರ ವ್ಯವಹಾರ ನಡೆಸಲು ಹಣ ಚಲಾವಣೆಗೆ ಅವಕಾಶ ಕಲ್ಪಿಸುವಂತೆ ಕೋರಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ಜಿಲ್ಲೆಯ 288 ಕೃಷಿ ಪತ್ತಿನ ಹಾಗೂ ಕ್ರೆಡಿಟ್ ಸಹಕಾರ ಸೊಸೈಟಿಗಳು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿವೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಜಂಟಿ ಆಶ್ರಯದಲ್ಲಿ ಮಂಗಳವಾರ ಅಜ್ಜರಕಾಡು ಪುರಭವನದ ಮಿನಿ ಸಭಾಭವನದಲ್ಲಿ ಆಯೋಜಿಸಲಾದ ಜಿಲ್ಲೆಯ ಕೃಷಿ ಪತ್ತಿನ/ಕ್ರೆಡಿಟ್/ಇತರ ಸಹಕಾರ ಸಂಘಗಳ ಅಧ್ಯಕ್ಷರು/ಮುಖ್ಯಕಾರ್ಯ ನಿರ್ವಹಣಾಧಿಕಾರಿಯವರಿಗೆ ಸಹಕಾರ ಸಂಘಗಳ ಆರ್ಥಿಕ ಚಟುವಟಿಕೆಗಳ ಕುರಿತ ಮಾಹಿತಿ ಶಿಬಿರದಲ್ಲಿ ಈ ಒಮ್ಮತ ನಿರ್ಣಯವನ್ನು ತೆಗೆದುಕೊಳ್ಳ ಲಾಯಿತು.

ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿ, ಹಳೆಯ 500 ಮತ್ತು 1000ರೂ. ನೋಟುಗಳನ್ನು ವಿನಿಮಯ ಮಾಡುವ ಅವಕಾಶ ಆರ್‌ಬಿಐನಿಂದ ಪರವಾನಿಗೆ ಪಡೆದಿರುವ ಬ್ಯಾಂಕ್‌ಗಳಿಗೆ ಮಾತ್ರ ಅವಕಾಶ ಇರುವುದರಿಂದ ನಾವು ಅದನ್ನು ಕೇಳುತ್ತಿಲ್ಲ. ಸೊಸೈಟಿಗಳಲ್ಲಿ ಹಣ ಚಲಾವಣೆ ಇಲ್ಲದೆ ಕಳೆದ 12 ದಿನಗಳಿಂದ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಸಹಕಾರ ಸಂಘಗಳ ಆರ್ಥಿಕ ಚಟುವಟಿಕೆಗಳನ್ನು ಶೀಘ್ರ ನಿರಾತಂಕವಾಗಿ ಪುನರಾರಂಭಿಸುವ ನಿಟ್ಟಿನಲ್ಲಿ ಹೈಕೋರ್ಟ್‌ನಲ್ಲಿ ಯೂನಿಯನ್ ನೇತೃತ್ವದಲ್ಲಿ ಪ್ರತಿ ಸೊಸೈಟಿಗಳು ವಕಾಲತ್ತು ಅರ್ಜಿ ಸಲ್ಲಿಸಲಿದೆ ಎಂದರು.

ಸರಕಾರದ ನಿಲುವುಗಳಲ್ಲಿ ಸರಿಯಾದ ಸ್ಪಷ್ಟತೆ ಇಲ್ಲದ ಪರಿಣಾಮ ದೇಶ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ. 110ವರ್ಷಗಳ ಹಿಂದೆ ಸೊಸೈಟಿಗಳು ಹುಟ್ಟಿಕೊಳ್ಳಲು ಹೋರಾಟ ನಡೆಸಿದರೆ, ಇಂದು ಬದುಕಿಗಾಗಿ ಹೋರಾಟ ನಡೆಸುವ ಸ್ಥಿತಿ ಎದುರಾಗಿದೆ. ಈ ಹೋರಾಟ ನಮ್ಮ ಉಳಿವಿಗಾಗಿಯೇ ಹೊರತು ಸರಕಾರದ ವಿರುದ್ಧ ಅಲ್ಲ. ಶೇ.60ರಷ್ಟು ಗ್ರಾಮೀಣ ಪ್ರದೇಶದ ಜನರು ತೊಡಗಿಸಿಕೊಂಡಿರುವ ಸೊಸೈಟಿಗಳನ್ನು ಈ ವ್ಯಾಪ್ತಿಯಿಂದ ಹೊರ ಗಿಟ್ಟಿರುವುದು ಸರಕಾರ ಮಾಡಿರುವ ದೊಡ್ಡ ಅಪರಾಧವಾಗಿದೆ. ಈ ಕುರಿತು 12ದಿನಗಳಿಂದ ಸರಕಾರದೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದೇವೆ. ಇವು ಯಾವುದಕ್ಕೂ ಈವರೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ತಿಳಿಸಿದರು.

ಯೂನಿಯನ್‌ನ ಕೋಶಾಧಿಕಾರಿ ಜಯಕರ ಶೆಟ್ಟಿ ಇಂದ್ರಾಳಿ, ನಿರ್ದೇಶಕ ರಾದ ಗೋಪಿಕೃಷ್ಣ ರಾವ್, ಎಸ್.ಕೆ.ಮಂಜುನಾಥ್, ಚಂದ್ರಶೇಖರ್ ಶೆಟ್ಟಿ, ವೈ.ಸುಧೀರ್‌ಕುಮಾರ್ ಉಪಸ್ಥಿತರಿದ್ದರು.

ಸೊಸೈಟಿಗಳ ಮೇಲೆ ದಾಳಿ ನಡೆದಿಲ್ಲ

ಜಿಲ್ಲೆಯಲ್ಲಿ ಯಾವುದೇ ಸಹಕಾರಿ ಸಂಘಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿಲ್ಲ. ಈ ಬಗ್ಗೆ ಹಬ್ಬುತ್ತಿರುವುದು ಕೇವಲ ವದಂತಿ. ಇಂತಹ ಊಹಾಪೋಹಾಗಳಿಗೆ ಯಾರೂ ಕಿವಿಗೊಡಬಾರದು. ಕೇಂದ್ರ ಸರಕಾರದ ನೋಟು ರದ್ಧತಿಯ ಪರಿಣಾಮವಾಗಿ ಇಂದು ಸಹಕಾರಿ ಸಂಘಗಳ ಬಗ್ಗೆ ಜನರಿಗೆ ಅಪನಂಬಿಕೆ ಮೂಡುವಂತಾಗಿದೆ. ಸೊಸೈಟಿಗಳಲ್ಲಿ ಜನರು ಇರಿಸಿದ್ದ ಠೇವಣಿಗಳನ್ನು ಯಾವುದೇ ಸಂದರ್ಭದಲ್ಲಿಯೂ ನಾವು ನೀಡಲು ಬದ್ಧರಾಗಿದ್ದೇವೆ ಎಂದು ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News