ಬ್ಯಾಂಕ್‌ನಲ್ಲಿ ಖಾಲಿಯಾದ ಹಣ: ಉದ್ರಿಕ್ತಗೊಂಡ ಗ್ರಾಹಕರು

Update: 2016-11-23 18:43 GMT

 ಉಪ್ಪಿನಂಗಡಿ, ನ.23: ಇಲ್ಲಿನ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಹಣ ಖಾಲಿಯಾಗಿದ್ದರಿಂದ ಸರತಿ ಸಾಲಿನಲ್ಲಿ ನಿಂತಿದ್ದ ಗ್ರಾಹಕರು ಆಕ್ರೋಶ ಗೊಂಡು ಸ್ಥಳದಲ್ಲಿ ಕೆಲಕಾಲ ಉದ್ರಿಕ್ತ ಸ್ಥಿತಿ ನಿರ್ಮಾಣವಾದ ಘಟನೆ ಬುಧವಾರ ನಡೆದಿದೆ. ಬ್ಯಾಂಕ್‌ನಲ್ಲಿ ಬುಧವಾರ ಬೆಳಗ್ಗೆ 11ಗಂಟೆ ಲಭ್ಯವಿದ್ದ ಎಲ್ಲ ಹಣವೂ ಮುಗಿಯಿತೆಂದು ತಿಳಿ ಸಿದ ಬ್ಯಾಂಕ್ ಅಧಿಕಾರಿಗಳು, ಸರತಿ ಸಾಲಿನಲ್ಲಿ ನಿಂತಿದ್ದವರನ್ನು ಹಿಂದಿರುಗಲು ವಿನಂತಿಸಿದರು. ಆದರೆ, ಅಷ್ಟರಲ್ಲಿ ಅಲ್ಲಿದ್ದ ಕೆಲವರು ಶ್ರೀಮಂತ ಗ್ರಾಹಕರಿಗೆ ಲಕ್ಷಾಂತರ ರೂ. ಹಣವನ್ನು ವಿನಿಮಯಕ್ಕಾಗಿ ನೀಡಿ, ಸರತಿ ಸಾಲಿನಲ್ಲಿ ನಿಂತ ಗ್ರಾಹಕರನ್ನು ಹಣವಿಲ್ಲ ಎಂಬ ಕಾರಣ ನೀಡಿ ವಾಪಸ್ ಕಳುಹಿಸುತ್ತಿದ್ದಾರೆಂದು ಅಪಾದಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದಭರ್ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು. ಪರಿಸ್ಥಿತಿ ಕೈ ಮೀರು ವುದನ್ನು ಅರಿತ ಬ್ಯಾಂಕ್ ಸಿಬ್ಬಂದಿ ಪೊಲೀಸ್ ಇಲಾಖೆಯ ಸಹಕಾರ ಕೋರಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಲ್ಲಿದ್ದವರನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಗ್ರಾಮೀಣ ಭಾಗದ ಬ್ಯಾಂಕ್‌ಗಳಿಗೆ ಅಗತ್ಯದಷ್ಟು ಹಣ ಸರಬರಾಜು ಆಗದೇ ಇರುವುದೇ ಈ ಎಲ್ಲ ತೊಂದರೆಗಳಿಗೆ ಕಾರಣವಾಗುತ್ತಿವೆ. 


ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕರು ಸೋಮವಾರ ಸರಬರಾಜಾಗಿದ್ದ 8 ಲಕ್ಷ ರೂ. ಮಂಗಳವಾರ ವಿತರಿಸಲಾಗಿತ್ತು. 4ಲಕ್ಷ ರೂ. ನಗದನ್ನು ಬುಧವಾರ ವಿತರಿಸಲು ಮುಂದಾಗಿ ಹನ್ನೊಂದು ಗಂಟೆಗೆ ಎಲ್ಲ ಹಣ ಮುಗಿದಿದ್ದು, ಈ ಮಧ್ಯೆ ಯಾರೋ ಸುಳ್ಳು ಅಪಾದನೆ ಮಾಡಿದ ಕಾರಣಕ್ಕೆ ಗ್ರಾಹಕರು ಉದ್ರಿಕ್ತರಾಗಿ ವ್ಯವಹರಿಸಿದ್ದಾರೆ. ನಮ್ಮ ಬ್ಯಾಂಕ್ ಶಾಖೆಯಲ್ಲಿ ಯಾರಿಗೂ ಸರಕಾರ ಸೂಚಿಸಿದ ನಿಯಮಾವಳಿಯನ್ನು ಉಲ್ಲಂಘಿಸಿ ಹಣ ನೀಡಿಲ್ಲ. ಹಣ ಬಂದಿರುವುದು ಹಾಗೂ ಪಾವತಿಸಿರುವುದು ಎಲ್ಲವೂ ನಿಯಮ ಬದ್ಧವಾಗಿಯೇ ದಾಖಲಾಗಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News