ದಾನಿಗಳ ನೆರವಿನಿಂದ ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Update: 2016-11-24 11:31 GMT

ಉಡುಪಿ, ಆ.24: ದಾನಿಗಳು ಹಾಗೂ ಜನಪ್ರತಿನಿಧಿಗಳ ನೆರವಿನಿಂದ ಉದ್ಯಾವರದ ಮಿರ್ಜಾ ಖಲೀಲ್ ಬೇಗ್ ಹಾಗೂ ಮಿರ್ಜಾ ತಬಸ್ಸುಮ್ ದಂಪತಿಯ ಹುಟ್ಟು ಕಿವುಡ ಮಕ್ಕಳಾದ ಮಿರ್ಜಾ ಫಾತಿಮಾ ಮೆಹೆಕ್(13) ಹಾಗೂ ಮಿರ್ಜಾ ಮೈಝಾ ಫಾತಿಮಾ(3) ಅವರ ಶಸ್ತ್ರ ಚಿಕಿತ್ಸೆಯನ್ನು ಇತ್ತೀಚೆಗೆ ಯಶಸ್ವಿಯಾಗಿ ನಡೆಸಲಾಗಿದ್ದು, ಇದರಿಂದ ಈ ಮಕ್ಕಳಿಬ್ಬರು ಸಂಪೂರ್ಣವಾಗಿ ಕಿವಿ ಕೇಳುವಂತಾಗಿದ್ದಾರೆ.

‘ಒಂದೇ ಕುಟುಂಬ ಇಬ್ಬರು ಕಂದಮ್ಮಗಳಿಗೆ ಕಿವಿ ಕೇಳಲ್ಲ!’ ಎಂಬ ಶಿರ್ಷಿಕೆ ಯಡಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ 20ಲಕ್ಷ ರೂ. ನೆರವು ಕಲ್ಪಿಸುವಂತೆ ವಾರ್ತಾಭಾರತಿ ಪತ್ರಿಕೆಯು ಜು.18ರಂದು ವರದಿ ಪ್ರಕಟಿಸಿತ್ತು. ಅದರಂತೆ ಹಲವು ದಾನಿಗಳು ಉದ್ಯಾವರದ ಮಿರ್ಜಾ ಖಲೀಲ್ ಬೇಗ್ ಖಾತೆಗೆ ಹಣ ಜಮಾ ಮಾಡಿದ್ದರು. ಅಲ್ಲದೆ ಸಚಿವ ಯು.ಟಿ.ಖಾದರ್ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮುತುವರ್ಜಿ ಯಿಂದಲೂ ಸರಕಾರದಿಂದ ಹಣ ಬಿಡುಗಡೆಯಾಗಿತ್ತು.

ಅದರಂತೆ ಈ ಇಬ್ಬರು ಮಕ್ಕಳಿಗೆ ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ವಸಂತಿ ಆನಂದ್ ಆ.22ರಂದು ಯಶಸ್ವಿ ಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈಗ ಈ ಮಕ್ಕಳಿಗೆ ಸಂಪೂರ್ಣ ಕಿವಿ ಕೇಳುತ್ತಿದೆ. ಆದರೆ ಹುಟ್ಟಿನಿಂದ ಯಾವುದೇ ಶಬ್ದ ಆಲಿಸಿದ ಈ ಮಕ್ಕಳು ಇದೀಗ ಮಾತನಾಡಲು ಪ್ರಯತ್ನಪಡುತ್ತಿದ್ದಾರೆ. ಒಂದೊಂದೆ ಶಬ್ದವನ್ನು ಉಚ್ಛರಿಸುತ್ತ ಶೇ.5ರಷ್ಟು ಪ್ರಗತಿ ಕಂಡಿದ್ದಾರೆ. ಇನ್ನು ಇವರಿಗೆ ಮೂರು ವರ್ಷ ಥೆರಪಿ ಕೋರ್ಸ್‌ಗಳು ಮುಂದುವರಿಯಲಿದೆ.

‘ಪತ್ರಿಕೆಯಲ್ಲಿ ಬಂದ ವರದಿ ನಂತರ ದಾನಿಗಳು ಮಕ್ಕಳ ಚಿಕಿತ್ಸೆಗೆ ನೆರವು ಕಲ್ಪಿಸಿದ್ದಾರೆ. ಅಲ್ಲದೆ ಸಚಿವ ಯು.ಟಿ.ಖಾದರ್, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅವರ ಆಪ್ತ ಕಾರ್ಯದರ್ಶಿಗಳು ಸರಕಾರದಿಂದ ಹಣ ಬಿಡುಗಡೆ ಮಾಡಲು ಸಹಕರಿಸಿದ್ದಾರೆ. ಅದಕ್ಕಿಂತ ದೊಡ್ಡದಾಗಿ ಎಲ್ಲರ ದುವಾ ನಮ್ಮ ಮಕ್ಕಳು ಗುಣಮುಖರಾಗಲು ಕಾರಣವಾಗಿದೆ’ ಎಂದು ಮಿರ್ಜಾ ಖಲೀಲ್ ಬೇಗ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News