ಮಧ್ಯರಾತ್ರಿ ಪ್ರಪಾತಕ್ಕೆ ಬಿದ್ದಿದ್ದವರನ್ನು ರಕ್ಷಿಸಿ ಮಾನವೀಯತೆ ಮೆರೆದ ಯುವಕರು

Update: 2016-11-24 11:51 GMT

ಪುತ್ತೂರು, ನ.24: ಮಧ್ಯರಾತ್ರಿಯಲ್ಲಿ ಬೈಕ್ ಅಪಘಾತಕ್ಕೀಡಾಗಿ ಅಂದಾಜು 40ರಿಂದ 50 ಅಡಿ ಆಳದಲ್ಲಿ ಬಿದ್ದುಕೊಂಡಿದ್ದ ಸವಾರರಿಬ್ಬರನ್ನು ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರನ್ನೂ ಮೇಲಕ್ಕೆತ್ತಿ ರಕ್ಷಿಸುವ ಮೂಲಕ ಪುತ್ತೂರಿನ ಯುವಕರಿಬ್ಬರು ಮಾನವೀಯತೆ ಮೆರೆದಿದ್ದಾರೆ.

ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿಯ ಕಮರುದ್ದೀನ್ ಹಾಗೂ ಮೊಟ್ಟೆತ್ತಡ್ಕದ ಶಮೀರ್ ಸಾಹಸ ಮೆರೆದ ಯುವಕರಾಗಿದ್ದಾರೆ.

ನ.21ರಂದು ಶಮೀರ್ ಅವರು ವ್ಯಕ್ತಿಯೊಬ್ಬರನ್ನು ಬೆಂಗಳೂರಿಗೆ ಬಿಡಲೆಂದು ತಮ್ಮ ಇನ್ನೋವಾ ಕಾರಿನಲ್ಲಿ ತೆರಳಿದ್ದು ಜೊತೆಗೆ ಗೆಳೆಯ ಕಮರುದ್ದೀನ್ ಅವರನ್ನು ಕರೆದುಕೊಂಡು ಹೋಗಿದ್ದರು. ಬಳಿಕ ಬೆಂಗಳೂರಿನಿಂದ ಊರಿಗೆ ಹೊರಟ ಅವರು ಸಕಲೇಶಪುರ ಮೂಲಕ ಪುತ್ತೂರಿಗೆ ಬರುತ್ತಿದ್ದ ದಾರಿ ಮಧ್ಯೆ ಶಿರಾಡಿ ಘಾಟ್ ಬಳಿ ತಲುಪುತ್ತಿದ್ದಂತೆ ಮಧ್ಯರಾತ್ರಿ ಸುಮಾರು 1:30ರ ವೇಳೆ ರಸ್ತೆ ಬದಿಯಲ್ಲಿ ಕೆ.ಎ. 09 ಎಚ್.ಇ. 3857 ನಂಬರಿನ ಪಲ್ಸರ್ ಬೈಕೊಂದು ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಕಂಡು ಬಂದಿತ್ತು.

ರಸ್ತೆ ಬದಿಯಲ್ಲಿ ಇಳಿಜಾರು ಪ್ರದೇಶಕ್ಕೆ ವಾಲಿ ನಿಂತಿದ್ದ ಬೈಕನ್ನು ಗಮನಿಸಿದ ಅವರಿಬ್ಬರು ಸಂಶಯಗೊಂಡು ತಮ್ಮ ಕಾರನ್ನು ನಿಲ್ಲಿಸಿ ಬೈಕ್ ಬಳಿಗೆ ತೆರಳಿ ನೋಡಿದಾಗ ಸುಮಾರು ಅಡಿ ಆಳದಿಂದ ಶಬ್ದವೊಂದು ಕೇಳುತ್ತಿತ್ತು. ಬಳಿಕ ಅವರಿಬ್ಬರು ಸೇರಿಕೊಂಡು ಅದೇ ರಸ್ತೆಯಾಗಿ ಹೋಗುತ್ತಿದ್ದ ಕೆಲವು ವಾಹನಗಳನ್ನು ನಿಲ್ಲಿಸಿ ಶಬ್ದ ಕೇಳುತ್ತಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಬಳಿಕ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಇಬ್ಬರು ಪೊಲೀಸರು ಧಾವಿಸಿದ್ದರು. ಈ ವೇಳೆ ಆಳದಿಂದ ಶಬ್ದ ಕೇಳುತ್ತಿರುವುದನ್ನು ಖಚಿತಪಡಿಸಿಕೊಂಡ ಯುವಕರು ಹಾಗೂ ಪೊಲೀಸರು ಪ್ರಪಾತದಲ್ಲಿ ಯಾರೋ ಬಿದ್ದಿರುವುದನ್ನು ಖಚಿತಪಡಿಸಿಕೊಂಡರು.

ಬಳಿಕ ಲಾರಿಯೊಂದನ್ನು ನಿಲ್ಲಿಸಿ ಅದರಲ್ಲಿದ್ದ ಹಗ್ಗವನ್ನು ಬಳಸಿದ ಶಮೀರ್ ಅವರು ಅಪಾಯಕಾರಿ ಸನ್ನಿವೇಶವನ್ನು ಲೆಕ್ಕಿಸದೆ ಸಣ್ಣ ಟಾರ್ಚ್ ಲೈಟ್‌ನ ಸಹಾಯದೊಂದಿಗೆ ಆಳ ಪ್ರಪಾತಕ್ಕೆ ಇಳಿದಿದ್ದು ಅಲ್ಲಿ ಇಬ್ಬರು ಯುವಕರಿದ್ದು ಅದರಲ್ಲಿ ಓರ್ವ ಯುವಕ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಬಳಿಕ ಕಮರುದ್ದೀನ್ ಅವರೂ ಹಗ್ಗದ ಸಹಾಯದಿಂದ ಕೆಳಕ್ಕೆ ಇಳಿದು ಇಬ್ಬರೂ ಸೇರಿ ಅಪಘಾತಕ್ಕೀಡಾಗಿ ಬಿದ್ದುಕೊಂಡಿದ್ದ ಯುವಕರನ್ನು ಕೆಲವು ಹೊತ್ತು ಪ್ರಯತ್ನಪಟ್ಟು ಮೇಲೆ ತರಲು ಪ್ರಯತ್ನಿಸಿದ್ದರು. ಪೊಲೀಸರು ಹಾಗೂ ಸೇರಿದ್ದ ಇತರ ವಾಹನ ಚಾಲಕರು ಮೇಲೆ ನಿಂತು ಹಗ್ಗವನ್ನು ಎಳೆಯಲು ಸಹಾಯ ಮಾಡಿದ್ದಾರೆ. ಹೇಗೋ ಮಾಡಿ ಇಬ್ಬರನ್ನೂ ಮೇಲಕ್ಕೆತ್ತಿ ತಂದಾಗ ಒಬ್ಬಾತ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಕಂಡು ಬಂದರೆ, ಇನ್ನೊಬ್ಬಾತ ಗಂಭೀರಾವಸ್ಥೆಯಲ್ಲಿದ್ದರೂ ಲಾರಿಯೊಂದು ಢಿಕ್ಕಿ ಹೊಡೆದು ತಾವು ಪ್ರಪಾತಕ್ಕೆ ಬಿದ್ದಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಕ್ಷಣೆಗೊಳಗಾದ ಯುವಕರನ್ನು ತಿಮ್ಮರಾಜು ಮೈಸೂರು, ಮತ್ತು ಮಂಡ್ಯದ ಪ್ರವೀಣ್ ಎಂದು ಗುರುತಿಸಲಾಗಿದೆ. ಬಳಿಕ ಇಬ್ಬರನ್ನೂ ಆ್ಯಂಬುಲೆನ್ಸ್ ಮೂಲಕ ಸಕಲೇಶಪುರದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಬೈಕ್‌ಗೆ ಗುದ್ದಿದ ಲಾರಿ ಪರಾರಿಯಾಗಿದೆ.

ಯುವಕರಿಬ್ಬರ ಸಾಹಸಕ್ಕೆ ಶ್ಲಾಘನೆ

ಮಧ್ಯರಾತ್ರಿ ವೇಳೆ ಅದೂ ನಿರ್ಜನ ಪ್ರದೇಶದಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಅಪಘಾತಕ್ಕೀಡಾಗಿ ಆಳಕ್ಕೆ ಬಿದ್ದಿದ್ದ ಇಬ್ಬರನ್ನು ರಕ್ಷಿಸಿದ ಶಮೀರ್ ಹಾಗೂ ಕಮರುದ್ದೀನ್ ಅವರ ಸಾಹಸ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಸಾಮಾಜಿಕ ತಾಣದಲ್ಲೂ ಈ ಬಗ್ಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಕಮರುದ್ದೀನ್ ಅವರು ಇತ್ತೀಚೆಗೆ ಬೆಳ್ಳಾರೆ ಸಮೀಪ ಓಮ್ನಿ ಕಾರೊಂದು ಅಪಘಾತಕ್ಕೀಡಾದ ಸಂದರ್ಭದಲ್ಲಿ ಅದರಲ್ಲಿದ್ದ ಗಾಯಗೊಂಡಿದ್ದ ಪ್ರಯಾಣಿಕರನ್ನು ತಕ್ಷಣ ಹೊರಕ್ಕೆ ತೆಗೆದು ಆಸ್ಪತ್ರೆಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಧರ್ಮವನ್ನು ಮೀರಿದ ಮಾನವೀಯತೆ

ಕಮರುದ್ದೀನ್ ಹಾಗೂ ಶಮೀರ್ ಎಂಬಿಬ್ಬರು ಮುಸ್ಲಿಂ ಯುವಕರು ಹಿಂದೂ ಧರ್ಮಕ್ಕೆ ಸೇರಿದ ತಿಮ್ಮರಾಜು ಹಾಗೂ ಪ್ರವೀಣ್ ಅವರನ್ನು ರಕ್ಷಿಸುವ ಮೂಲಕ ಮಾನವೀಯತೆಯೇ ನಿಜವಾದ ಧರ್ಮ, ಮಾನವೀಯತೆಗೆ ಮಿಗಿಲಾದ ಧರ್ಮ ಇನ್ನೊಂದಿಲ್ಲ ಎಂಬುವುದನ್ನು ಸಮಾಜಕ್ಕೆ ತೋರಿಸಿಕೊಟ್ಟಂತಾಗಿದೆ. ಸಣ್ಣ, ಪುಟ್ಟ ವಿಚಾರಗಳಿಗೂ ಧರ್ಮ, ಜಾತಿ ಎಂದು ಕಚ್ಚಾಟ ನಡೆಯುವ ಪ್ರಸಕ್ತ ಕಾಲಘಟ್ಟದಲ್ಲಿ ಇಂತದ್ದೊಂದು ಮಾನವೀಯ ಧರ್ಮಗಳು ಎಲ್ಲೆಡೆ ಪಸರಸಬೇಕಾಗಿರುವುದು ಅಗತ್ಯವಾಗಿದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾನು ಮತ್ತು ಶಮೀರ್ ಬೈಕ್ ಬಳಿಗೆ ಬಂದು ನೋಡಿದಾಗ ಕೆಳಗಿನಿಂದ ಕಾಪಾಡೀ...ನೀರು ಕೊಡಿ..ಎಂದು ಹೇಳುತ್ತಿದ್ದುದು ಸಣ್ಣದಾಗಿ ಕೇಳಿಸುತ್ತಿತ್ತು. ಬಳಿಕ ಸ್ಥಳಕ್ಕೆ ಇಬ್ಬರು ಪೊಲೀಸರು ಬಂದರು. ಬಳಿಕ ಲಾರಿಯೊಂದರಲ್ಲಿದ್ದ ಹಗ್ಗದ ಸಹಾಯದಿಂದ ಪೊಲೀಸರ ಹಾಗೂ ಅಲ್ಲಿದ್ದ ಕೆಲವರ ಸಹಕಾರದೊಂದಿಗೆ ನಾನು ಮತ್ತು ಗೆಳೆಯ ಶಮೀರ್ ಕೆಳಕ್ಕೆ ಇಳಿದು ತಿಮ್ಮರಾಜು ಹಾಗೂ ಪ್ರವೀಣ್‌ರವರನ್ನು ರಕ್ಷಿಸಿದೆವು. ಮೇಲಕ್ಕೆತ್ತಿದಾಗ ಇಬ್ಬರೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರ ರಕ್ಷಣೆಗಾಗಿ ಕೆಳಕ್ಕೆ ಇಳಿಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಧರ್ಮಕ್ಕಿಂತ ಮನುಷ್ಯತ್ವ ಮುಖ್ಯ.

- ಕಮರುದ್ದೀನ್ ರೆಂಜಲಾಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News