ಚಿತ್ರಮಂದಿರ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ತಟ್ಟಿದ ‘ನೋಟು ಅಮಾನ್ಯ’ದ ಬಿಸಿ

Update: 2016-11-24 12:22 GMT

ಮಂಗಳೂರು, ನ.24: ಕೇಂದ್ರ ಸರಕಾರವು ಯಾವುದೇ ಪೂರ್ವಸಿದ್ಧತೆಯಿಲ್ಲದೆ 500 ಮತ್ತು 1000 ರೂ. ನೋಟುಗಳನ್ನು ರಾತ್ರೋ ರಾತ್ರಿ ಅಮಾನ್ಯಗೊಳಿಸಿದ ಹಿನ್ನೆಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನತೆ ‘ಬದುಕು’ ಮುನ್ನಡೆಸಲಾಗದೆ ಕಂಗೆಟ್ಟಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಕಲೆ- ಸಂಸ್ಕೃತಿಯನ್ನೇ ನಂಬಿಕೊಂಡ ಲೇಖಕರು, ಚಿತ್ರ ಸಾಹಿತಿಗಳು, ಹಾಡುಗಾರರು, ಕಲಾವಿದರು, ಸಣ್ಣಪುಟ್ಟ ನಟ-ನಟಿಯರು ಕೂಡ ಸಮಸ್ಯೆಗೆ ಸಿಲುಕಿದ್ದಾರೆ.

ಮಂಗಳೂರು ಮತ್ತು ಹೊರವಲಯದ ಹಲವು ಕಡೆ ನಾಟಕ, ಯಕ್ಷಗಾನ, ರಸಮಂಜರಿ ಹೀಗೆ ದಿನಂಪ್ರತಿ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಸಾಮಾನ್ಯ. ವಿವಿಧ ಸಂಘಟನೆಗಳು ಆರ್ಥಿಕ ಲಾಭದ ನಿರೀಕ್ಷೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತವೆ. ಆದರೆ ನೋಟು ಅಮಾನ್ಯದಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿವಾಣ ಬಿದ್ದಿದೆ.

ಇದು ಕೇವಲ ಖಾಸಗಿ ಸಂಘ-ಸಂಸ್ಥೆಗಳಿಗೆ ಸೀಮಿತವಾಗಿಲ್ಲ. ಸರಕಾರದ ಅನುದಾನ ಪಡೆಯುವ ಅಕಾಡಮಿಗಳು ಕೂಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಹಿಂದೇಟು ಹಾಕುತ್ತಿವೆ. ಈ ಹಿಂದೆ ಸಾಂಸ್ಕೃತಿಕ ಸಂಘಟನೆಗಳಿಗೆ, ಕಲಾವಿದರಿಗೆ, ಲೇಖಕರು, ಸಾಹಿತಿಗಳಿಗೆ ನಗದು ಅಥವಾ ಚೆಕ್ ಮೂಲಕ ಗೌರವಧನ ಪಾವತಿಸುತ್ತಿದೆ. ಆ ಬಳಿಕ ನಗದು ಬದಲು ನೇರ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗತೊಡಗಿತ್ತು. ಇದೀಗ ‘ನೋಟು ಅಮಾನ್ಯ’ದ ಬಳಿಕ ಸೂಕ್ತ ದಾಖಲೆಪತ್ರಗಳನ್ನು ಸಲ್ಲಿಸುವುದು ಅನಿವಾರ್ಯವಾದ ಕಾರಣ ಸಂಘಟನೆಗಳ ಮುಖಂಡರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಹಿಂದೇಟು ಹಾಕಿದರೆ ದಾಖಲೆಪತ್ರ ನೀಡದೆ ಬೇಕಾಬಿಟ್ಟಿ ಅನುದಾನ ಪಡೆಯುವುದಕ್ಕೂ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ. ಇವೆಲ್ಲದರ ಪರಿಣಾಮ ಕಲಾವಿದರ ಮತ್ತು ಸಂಘಟನೆಗಳ ಮೇಲೆ ದುಷ್ಪರಿಣಾಮ ಬೀರಿದೆ.

ಇನ್ನು ಮಂಗಳೂರು ಚಲನಚಿತ್ರ ಮಂದಿರಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಚಿಲ್ಲರೆ ಸಮಸ್ಯೆಯು ಚಿತ್ರಪ್ರೇಮಿಗಳನ್ನೂ ನಿರಾಶೆಗೊಳಿಸಿದೆ. ಚಿಲ್ಲರೆಯ ಕೊರತೆಯಿಂದಾಗಿ ಚಲನಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಆದರೆ, ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಚಿತ್ರನಿರ್ಮಾಪಕರು, ಚಿತ್ರಮಂದಿರದ ಮುಖ್ಯಸ್ಥರು ಹೇಳಿಕೊಳ್ಳಲು ಇಷ್ಟಪಡುತ್ತಿಲ್ಲ.

ದಿನಗೂಲಿ ನೌಕರ ಕೂಡ ತನ್ನಲ್ಲಿರುವ ಹಳೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲೋ, ವಿನಿಮಯ ಮಾಡಲೋ, ಹಣ ಪಡೆದುಕೊಳ್ಳಲೋ ಬ್ಯಾಂಕ್‌ಗಳಲ್ಲಿ ಕ್ಯೂ ನಿಲ್ಲುವುದು ಅನಿವಾರ್ಯವಾಗಿದೆ. ಈ ಮಧ್ಯೆ ಹೊರ ರಾಜ್ಯದ, ಹೊರ ಜಿಲ್ಲೆಯ ಕೂಲಿ ಕಾರ್ಮಿಕರು ವಾರದ ರಜೆಯ ದಿನ ಮಂಗಳೂರು, ಸುರತ್ಕಲ್, ಬಜ್ಪೆ ಮತ್ತಿತರ ಕಡೆ ನಡೆಯುವ ಸಂತೆಗಳಲ್ಲಿ ಆಹಾರ ಸಾಮಗ್ರಿಗಳನ್ನು ಪಡೆಯುವುದು, ಚಿತ್ರ ವೀಕ್ಷಿಸುವುದು ಸಹಜವಾಗಿತ್ತು. ಆದರೆ, ಈಗ ಎಲ್ಲರೂ ಹಣ ವಿನಿಮಯದ ಹಿಂದೆ ಬಿದ್ದ ಕಾರಣ ಮತ್ತು ನಿರೀಕ್ಷಿಸಿದಷ್ಟು ಚಿಲ್ಲರೆ, ನೋಟು ವಿನಿಮಯ ಮಾಡಿಕೊಳ್ಳಲಾಗದ್ದರಿಂದ ಎಲ್ಲದರ ಮೇಲೂ ಆರ್ಥಿಕ ಹೊಡೆತ ಮೇಲಿಂದ ಮೇಲೆ ಬೀಳುತ್ತಿವೆ.

ಚಲನಚಿತ್ರಗಳಿಗೆ ಹೊಡೆತ

ಇತ್ತೀಚಿನ ದಿನಗಳಲ್ಲಿ ತುಳು ಚಲನಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಬಿಡುಗಡೆಗೊಳ್ಳುತ್ತಿತ್ತು. ಆದರೆ, ಇದೀಗ ನೋಟು ಅಮಾನ್ಯವು ಚಲನಚಿತ್ರಗಳ ಮೇಲೆ ನೇರ ಪರಿಣಾಮ ಬೀರಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಇದೆ. ಹೀಗಾದರೆ ನಿರ್ಮಾಪಕದ ಬದುಕು ಅಯೋಮಯವಾಗಬಹುದು. ಇದು ಚಿತ್ರರಂಗವನ್ನು ನಂಬಿಕೊಂಡ ಎಲ್ಲ ಕಲಾವಿದರ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಟಿ.ಎ. ಶ್ರೀನಿವಾಸ, ಅಧ್ಯಕ್ಷರು, ತುಳು ಚಲನಚಿತ್ರ ನಿರ್ಮಾಪಕರ ಸಂಘ

500ರ ಹೊಸ ನೋಟು ಬಂದರೆ....

ಹೌದು... ನೋಟು ಅಮಾನ್ಯಗೊಂಡ ಬಳಿಕ ಬಿಡುಗಡೆಗೊಂಡ ಚಿತ್ರ ನಮ್ಮದು. ಸಾಕಷ್ಟು ಪ್ರಚಾರ, ನಿರೀಕ್ಷೆಯೊಂದಿಗೆ ಈ ಚಿತ್ರವನ್ನು ಬಿಡುಗಡೆಗೊಳಿಸಿದ್ದೆವು. ಆದರೆ, ನೋಟು ಅಮಾನ್ಯ ನಮ್ಮ ನಿರೀಕ್ಷೆಯನ್ನು ಸ್ವಲ್ಪಮಟ್ಟಿಗೆ ಹುಸಿಗೊಳಿಸಿದವು. ಕೆಲವು ದಿನದಿಂದ ನೂಕುನುಗ್ಗಲಿನ ಸನ್ನಿವೇಶ ಕಂಡು ಬರುತ್ತಿಲ್ಲ. ಹಾಗಂತ ನಾವು ಅಧೀರರಾಗಿಲ್ಲ. 500ರ ಹೊಸ ನೋಟು ಬಿಡುಗಡೆಯಾದರೆ ಈ ಸಮಸ್ಯೆಗೆ ಪರಿಹಾರವಾಗಬಹುದು. ಪ್ರೇಕ್ಷಕರು ಸಾಲುಗಟ್ಟಿ ಚಿತ್ರ ವೀಕ್ಷಿಸಲು ಬರುತ್ತಾರೆ ಎಂಬ ವಿಶ್ವಾಸವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News