ನಕಲಿ ಚಿನ್ನ ಗಿರವಿಟ್ಟು ವಂಚನೆ: ದೂರು

Update: 2016-11-24 13:58 GMT

ಉಡುಪಿ, ನ.24: ಉಡುಪಿ ಡಿಸಿಸಿ ಬ್ಯಾಂಕಿನಲ್ಲಿ ನಕಲಿ ಚಿನ್ನ ಗಿರವಿ ಇಟ್ಟು ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯಲ್ಲಿ ಚಿನ್ನದಂಗಡಿ ವ್ಯಾಪಾರ ನಡೆಸುತ್ತಿದ್ದ ಕೆ.ರಾಘವೇಂದ್ರ ಶೇಟ್ ಎಸ್‌ಸಿಡಿಸಿಸಿ ಬ್ಯಾಂಕಿನ ಉಡುಪಿ ಮುಖ್ಯ ಶಾಖೆಯಲ್ಲಿ ಸುಮಾರು 2012ರಿಂದ ವ್ಯವಹಾರ ಮಾಡುತ್ತಿದ್ದರು. ಎನ್.ರಾಮದಾಸ ಶೇಟ್ ಎಂಬವರು ಬ್ಯಾಂಕಿನಲ್ಲಿ ಚಿನ್ನ ಪರಿಶೋಧಕರಾಗಿ 1997ರಿಂದ ಕೆಲಸ ಮಾಡುತ್ತಿದ್ದರು. ಇವರು ಆಗಾಗ ಚಿನ್ನದ ಒಡವೆಗಳನ್ನು ಗಿರವಿ ಇಟ್ಟು ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದರು.

ಇವರಿಬ್ಬರ ಬಗ್ಗೆ 2015ರ ನವೆಂಬರ್ ತಿಂಗಳಲ್ಲಿ ಅನುಮಾನ ಬಂದು ವಿಚಾರಿಸಿದಾಗ ಅವರು ಮಾಡಿರುವ 64 ಸಾಲದ ಖಾತೆಗಳ ಪೈಕಿ 11 ಖಾತೆ ಗಳನ್ನು ಒಂದೊಂದಾಗಿ 2016ರ ಮೇವರೆಗೆ ಹಣವನ್ನು ವಟಾಯಿಸಿ ಚಿನ್ನವನ್ನು ಸಾಲಗಾರರ ಮುಖಾಂತರ ವಾಪಸು ಪಡೆದಿದ್ದಾರೆ. ನಂತರ ಯಾವುದೇ ಸಾಲದ ಖಾತೆಗೆ ಮರುಪಾವತಿಸದೆ ಇದ್ದುದರಿಂದ ಶಾಖಾ ಸಿಬ್ಬಂದಿ ಸಾಲದ ವಸೂಲಿಗಾಗಿ ಅವರನ್ನು ವಿಚಾರಿಸಿದ್ದರು. ಆಗ ಅವರು ಹಣವನ್ನು ಕಟ್ಟಿ ಚಿನ್ನವನ್ನು ಬಿಡಿಸಿಕೊಳ್ಳುವುದಾಗಿಯೂ ಆಶ್ವಾಸನೆ ಕೊಟ್ಟಿದ್ದರು.

ಆದರೆ ಕೇಂದ್ರ ಕಚೇರಿಯಿಂದ ಬೇರೆ ಚಿನ್ನ ಪರಿಶೋಧಕರನ್ನು ಕಳುಹಿಸಿ ಪರಿಶೀಲಿಸಿದಾಗ ಸಾಲಗಾರರ ಚಿನ್ನದಲ್ಲಿ ಅಸಲಿ ಹಾಗೂ ನಕಲಿ ಚಿನ್ನಗಳು ಸೇರಿರುವುದು ಕಂಡು ಬಂದಿದೆ. ಇವರು ಚಿನ್ನ ನಕಲಿ ಎಂದು ಗೊತ್ತಿದ್ದರೂ ಬ್ಯಾಂಕಿಗೆ ಮೋಸ ಮಾಡುವ ಇರಾದೆಯಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗಿರಿವಿಟ್ಟು ದುರ್ಲಾಭ ಪಡೆದು ಅಮಾಯಕ ಜನರಿಗೆ ಹಾಗೂ ಬ್ಯಾಂಕಿಗೆ ವಂಚನೆ, ಮೋಸ ಹಾಗೂ ನಂಬಿಕೆ ದ್ರೋಹ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News