ಇಸ್ರೇಲ್‌ನಲ್ಲಿ ತೀವ್ರಗೊಂಡ ಕಾಡ್ಗಿಚ್ಚು: ಸಾವಿರಾರು ಮಂದಿ ಪಲಾಯನ

Update: 2016-11-26 10:22 GMT

ಜೆರುಸಲೇಂ, ನ. 25: ಇಸ್ರೇಲ್‌ನ ಉತ್ತರದ ನಗರ ಹೈಫದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು ಇನ್ನಷ್ಟು ವ್ಯಾಪಿಸಿದ್ದು, ಜನರು ಸಾವಿರಾರು ಸಂಖ್ಯೆಯಲ್ಲಿ ಪಲಾಯನಗೈಯುತ್ತಿದ್ದಾರೆ.

ಎರಡು ತಿಂಗಳ ಅವಧಿಯ ಬರಗಾಲದ ಬಳಿಕ ನೆಲೆಸಿರುವ ಶುಷ್ಕ ವಾತಾವರಣ ಹಾಗೂ ಬಲವಾದ ಗಾಳಿ ಬೆಂಕಿ ಉಲ್ಬಣಗೊಳ್ಳಲು ಕಾರಣವಾಗುತ್ತಿದೆ. ಕಾಡ್ಗಿಚ್ಚು ಈಗ ದೇಶದ ಇತರ ಭಾಗಗಳಿಗೂ ಹಬ್ಬುತ್ತಿದೆ.

ಸಾವಿರಾರು ಮಂದಿಯ ಸ್ಥಳಾಂತರ

ಹೈಫ ನಗರದ ಆಕಾಶವನ್ನು ದಟ್ಟ ಹೊಗೆ ಆವರಿಸಿದ್ದು, ನಗರದಿಂದ ಹೊರ ಹೋಗುವಂತೆ ಸುಮಾರು 80,000 ನಿವಾಸಿಗಳಿಗೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಹೈಫದಲ್ಲಿ ಈಗಾಗಲೇ ಹಲವಾರು ಮನೆಗಳು ಸುಟ್ಟು ಹೋಗಿವೆ.

ಬೆಂಕಿಯ ಅಗಾಧ ಜ್ವಾಲೆಗಳನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹಗಲಿರುಳು ಪ್ರಯತ್ನಿಸುತ್ತಿದ್ದಾರೆ. ಆದರೆ, ಈಗಾಗಲೇ ಹಲವಾರು ಮನೆಗಳು ದುರಸ್ತಿ ಸಾಧ್ಯವಾಗದಷ್ಟು ಕರಕಲಾಗಿವೆ.

ಹೈಫ ಮತ್ತು ರಾಜಧಾನಿ ಟೆಲ್ ಅವೀವ್ ನಡುವಿನ ಹೆದ್ದಾರಿಯನ್ನು ಗುರುವಾರ ಸ್ವಲ್ಪ ಹೊತ್ತು ಮುಚ್ಚಲಾಗಿತ್ತು. ಈ ಅವಧಿಯಲ್ಲಿ ಅಧಿಕಾರಿಗಳು ಬೆಂಕಿ ಹರಡದಂತೆ ತಡೆಯುವ ಪ್ರಯತ್ನಗಳನ್ನು ನಡೆಸಿದರು.

ಪಶ್ಚಿಮ ದಂಡೆಯಲ್ಲೂ ಹಾನಿ

 ಆಕ್ರಮಿತ ಫಲೆಸ್ತೀನ್ ಮತ್ತು ಜೆರುಸಲೇಂಗೆ ಸಮೀಪದ ಒಂದು ಸ್ಥಳಕ್ಕೂ ಬೆಂಕಿ ಹಬ್ಬಿದೆ. ಇಲ್ಲಿ ಹಲವು ಮನೆಗಳು ಹಾಗೂ ಕಟ್ಟಡಗಳು ನಾಶವಾಗಿವೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬಲ ಗಾಳಿಯ ನಿರೀಕ್ಷೆಯಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಗಳಿವೆ. ಟರ್ಕಿ ಸೇರಿದಂತೆ ಹಲವು ದೇಶಗಳು ಬೆಂಕಿ ನಂದಿಸುವಲ್ಲಿ ಇಸ್ರೇಲ್‌ಗೆ ನೆರವು ನೀಡಲು ಮುಂದೆ ಬಂದಿವೆ.

ಭಯೋತ್ಪಾದನೆಯಂತೆ ಪರಿಗಣನೆ: ಪ್ರಧಾನಿ

ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದನ್ನು ಸಾಬೀತುಪಡಿಸುವ ಯಾವುದೇ ಪುರಾವೆ ಲಭ್ಯವಾದರೆ, ಕಾಡ್ಗಿಚ್ಚು ಪ್ರಕರಣವನ್ನು ‘ಭಯೋತ್ಪಾದನೆ’ಯೆಂಬಂತೆ ಪರಿಗಣಿಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ.

‘‘ಬೆಂಕಿ ಭಯೋತ್ಪಾದನೆಯನ್ನು ನಾವು ಎದುರಿಸುತ್ತಿದ್ದೇವೆ. ಬೆಂಕಿ ಭಯೋತ್ಪಾದನೆ ಜೊತೆಗೆ ನಾವು ಪ್ರಚೋದನೆಯನ್ನೂ ಎದುರಿಸುತ್ತಿದ್ದೇವೆ. ನಮಗೆ ಅವೆಲ್ಲವೂ ಒಂದೇ. ಇದಕ್ಕೆ ಕಾರಣರಾದವರನ್ನು ಹಿಡಿಯಲು ನಮ್ಮ ಎಲ್ಲ ಕಾನೂನುಬದ್ಧ ಬಲವನ್ನು ನಾವು ಬಳಸುತ್ತೇವೆ’’ ಎಂದರು ಅವರು ಹೇಳಿದರು.

ಇಸ್ರೇಲ್ ಅಧಿಕಾರಿಗಳು ನಾಲ್ಕು ಇಸ್ರೇಲಿ ಫೆಲೆಸ್ತೀನೀಯರನ್ನು ಈಗಾಗಲೇ ಬಂಧಿಸಿದ್ದಾರೆ. ಆದರೆ, ಸಾಕ್ಷ ಕೊರತೆಯ ಹಿನ್ನೆಲೆಯಲ್ಲಿ ನ್ಯಾಯಾಧೀಶರೊಬ್ಬರು ಅವರನ್ನು ಬಳಿಕ ಬಿಡುಗಡೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News