ಅಧಿವೇಶನಕ್ಕೂ ತಟ್ಟಿದ ಭಾರತ್ ಬಂದ್ ಬಿಸಿ

Update: 2016-11-25 13:13 GMT

ಬೆಳಗಾವಿ(ಸುವರ್ಣ ವಿಧಾನಸೌಧ), ನ.25: ಕೇಂದ್ರ ಸರಕಾರವು 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಿರುವುದನ್ನು ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ನ.28ರಂದು ಕರೆ ನೀಡಿರುವ ಭಾರತ್ ಬಂದ್ ಬಿಸಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕೂ ತಟ್ಟಿದೆ.

ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ನಡೆದಂತಹ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನ.28ರಂದು ಭಾರತ್ ಬಂದ್‌ಗೆ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶಕ್ಕಾಗಿ ಸುವರ್ಣ ವಿಧಾನಸೌಧದ ಭದ್ರತೆಗೆ ನಿಯೋಜಿಸಿರುವ ಸುಮಾರು 3600 ಮಂದಿ ಪೊಲೀಸರನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ನಿಯೋಜಿಸಬೇಕಾಗಿದೆ. ಆದುದರಿಂದ, ಸೋಮವಾರ ಸದನವನ್ನು ನಡೆಸದೆ, ಮುಂದಿನ ಶನಿವಾರ(ಡಿ.3)ದವರೆಗೆ ಸದನ ನಡೆಸಲು ನಿರ್ಧರಿಸಲಾಗಿದೆ.

ಸೋಮವಾರ(ನ.28) ಅಧಿವೇಶನ ನಡೆದರೆ, ಸುವರ್ಣ ವಿಧಾನಸೌಧಕ್ಕೆ ಸೂಕ್ತ ಭದ್ರತೆಯನ್ನು ಕಲ್ಪಿಸಲು ಪೊಲೀಸ್ ಸಿಬ್ಬಂದಿಗಳ ಕೊರತೆ ಎದುರಾಗಲಿದೆ. ಅಲ್ಲದೆ, ಶಾಸಕರ ಭದ್ರತೆ ಮೇಲೂ ಪರಿಣಾಮ ಬೀರಬಹುದು. ಆದುದರಿಂದ, ಮುಂದಿನ ಶುಕ್ರವಾರ ಮುಕ್ತಾಯ ವಾಗಬೇಕಾದ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯ ಸರಕಾರದ ತೀರ್ಮಾನವನ್ನು ಜೆಡಿಎಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದೆ. ಆದರೆ, ಅಧಿಕೃತ ಪ್ರತಿಪಕ್ಷ ಬಿಜೆಪಿ ಇದನ್ನು ವಿರೋಧಿಸಿ ಕಲಾಪ ಸಲಹಾ ಸಮಿತಿ ಸಭೆಯನ್ನು ಬಹಿಷ್ಕರಿಸಿ ಹೊರನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News