ಡಿಜಿಟಲ್ ಆಗಿ! : ಲೋಕಸಭೆಯಲ್ಲಿ ಜೇಟ್ಲಿ
ಹೊಸದಿಲ್ಲಿ, ನ.25: ನೋಟು ರದ್ದತಿಯ ಕುರಿತಾಗಿ ಹೆಚ್ಚಿರುವ ಚರ್ಚೆಯ ನಡುವೆಯೇ, ಸರಕಾರವು ಆರ್ಥಿಕತೆಯಲ್ಲಿ ಭೌತಿಕ ಹಣದ(ನೋಟು-ನಾಣ್ಯ) ಉಪಯೋಗವನ್ನು ಕಡಿಮೆ ಮಾಡಲು ಬಯಸಿದೆ. ಅದನ್ನು ಡಿಜಿಟಲ್ ಹಣದಿಂದ ಸ್ಥಾನಾಂತರಿಸಬೇಕಾಗಿದೆಯೆಂದು ಲೋಕಸಭೆಗಿಂದು ತಿಳಿಸಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಕೇಂದ್ರ ವಿತ್ರ ಸಚಿವ ಅರುಣ್ ಜೇಟ್ಲಿ, ಭೌತಿಕ ಹಣವು ಕಡಿಮೆಯಾಗಬೇಕು ಹಾಗೂ ವ್ಯಾಪಾರ ಮತ್ತು ವಾಣಿಜ್ಯ ಬೆಳೆಯಬೇಕೆಂದರು.
ಒಟ್ಟು 80 ಕೋಟಿ ಡೆಬಿಟ್ ಕಾರ್ಡ್‌ಗಳಲ್ಲಿ 40 ಕೋಟಿ ಕಾರ್ಡ್‌ಗಳು ಎಟಿಎಂಗಳಲ್ಲಿ ಸಕ್ರಿಯವಾಗಿ ಬಳಕೆಯಾಗುತ್ತಿವೆ. ಇಲೆಕ್ಟ್ರಾನಿಕ್ ವ್ಯಾಲೆಟ್ ಹಾಗೂ ನಿಧಿಗಳ ಡಿಜಿಟಲ್ ವರ್ಗಾವಣೆ ಸರಕಾರ ಉತ್ತೇಜಿಸುತ್ತಿರುವ ಭವಿಷ್ಯದ ತಂತ್ರಜ್ಞಾನವಾಗಿದೆ. ಅದಕ್ಕೆ ಕೊಡುಗೆ ನೀಡುವಂತೆ ವಿವಿಧ ರಾಜ್ಯಗಳಿಗೆ ಮನವಿ ಮಾಡಲಾಗಿದೆಯೆಂದು ಅವರು ಹೇಳಿದರು.
ನಗದು ರಹಿತ ಸಮಾಜದ ಕುರಿತು ಜನಜಾಗೃತಿ ಅಭಿಯಾನ ನಡೆಸಲು, ಅಂಗೀಕಾರ ಹಾಗೂ ಮೂಲ ಸೌಕರ್ಯ ವಿಸ್ತರಣೆಗೆ ಠೇವಣಿದಾರರ ಶಿಕ್ಷಣ ಹಾಗೂ ಜಾಗೃತಿ ನಿಧಿಯನ್ವಯ ಒಂದು ಮೀಸಲು ನಿಧಿಯೇ ಇದೆಯೆಂದು ಜೇಟ್ಲಿ ಮಾಹಿತಿ ನೀಡಿದರು.
ನಗದು ರಹಿತ ಸಮಾಜವೆಂದರೆ, ನಗದು ನಿಭಾವಣೆಗೆ ಕಡಿಮೆ ಬಂಡವಾಳ, ಪಾವತಿಗಳಲ್ಲಿ ಪಾರದರ್ಶಕತೆ ಹಾಗೂ ನಕಲಿ ನೋಟು ತಡೆಯೆಂದರ್ಥವೆಂದು ಅವರು ತಿಳಿಸಿದರು.