7ನೆ ದಿನವೂ ಸಂಸತ್ ಕಲಾಪ ನೋಟು ಪಾಲು

Update: 2016-11-25 14:31 GMT

ಹೊಸದಿಲ್ಲಿ, ನ.25: ನೋಟು ಅಮಾನ್ಯ ನಿರ್ಧಾರವನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದ ಕಾರಣ ಏಳನೇ ದಿನವೂ ಸಂಸತ್ ಕಲಾಪಕ್ಕೆ ಭಂಗ ಉಂಟಾಯಿತು. ಆದರೆ ಸರಕಾರ ವಿಪಕ್ಷಗಳ ಬೇಡಿಕೆಯನ್ನು ತಳ್ಳಿಹಾಕಿದೆ.

   ತಮ್ಮ ಬಳಿಯಿದ್ದ ಕಪ್ಪುಹಣವನ್ನು ಬಿಳಿಯಾಗಿಸಲು ಸರಕಾರ ಯಾವುದೇ ಸಮಯಾವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಕೆಲವರು ನೋಟು ಅಮಾನ್ಯ ನಿರ್ಧಾರವನ್ನು ಟೀಕಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ ಮತ್ತು ಎಡಪಕ್ಷಗಳ ಸದಸ್ಯರು ಏರು ಧ್ವನಿಯಲ್ಲಿ ಖಂಡಿಸಿದಾಗ ಕೋಲಾಹಲದ ಸ್ಥಿತಿಗೆ ಕಾರಣವಾಯಿತು.

 ರಾಜ್ಯಸಭೆಯಲ್ಲಿ ಬೆಳಿಗ್ಗೆ ಮಾಜಿ ಸದಸ್ಯ ದೀಪೇನ್ ಘೋಷ್ ಅವರ ನಿಧನಕ್ಕೆ ಶೋಕ ಸೂಚಿಸಿದ ಬಳಿಕ ಕಲಾಪ ಆರಂಭವಾಯಿತು. ವಿಷಯ ಪ್ರಸ್ತಾವಿಸಿದ ಬಿಎಸ್‌ಪಿ ನಾಯಕಿ ಮಾಯಾವತಿ, ವಿಪಕ್ಷ ಸದಸ್ಯರ ಬಳಿ ಕಪ್ಪುಹಣ ಇದೆ ಎಂದು ಪ್ರಧಾನಿ ಮಿಥ್ಯಾರೋಪ ಮಾಡಿದ್ದಾರೆ. ಈ ಬಗ್ಗೆ ತಕ್ಷಣ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

  ವಿರೋಧ ಪಕ್ಷಗಳು ಕಪ್ಪುಹಣವನ್ನು ಬೆಂಬಲಿಸುವುದಿಲ್ಲ ಎಂದು ನೋಟು ಅಮಾನ್ಯ ನಿರ್ಧಾರದ ಬಗ್ಗೆ ನಿನ್ನೆ ನಡೆದ ಚರ್ಚೆ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತಿತರ ವಿಪಕ್ಷ ನಾಯಕರು ಸ್ಪಷ್ಟವಾಗಿ ತಿಳಿಸಿದ್ದರು. ಅದಾಗ್ಯೂ ಮೋದಿ ಇಂತಹ ಅರೋಪ ಮಾಡಿರುವುದು ಖಂಡನಾರ್ಹ . ಈ ಹೇಳಿಕೆ ಬಗ್ಗೆ ಮೋದಿ ಕ್ಷಮೆ ಯಾಚಿಸಲೇಬೇಕು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕ ಗುಲಾಂ ನಬಿ ಆಜಾದ್ ಹೇಳಿದರು. ಈ ವೇಳೆ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ‘ಪ್ರಧಾನಮಂತ್ರಿ.. ಕ್ಷಮೆ ಯಾಚಿಸಿ..’ ಎಂದು ಘೋಷಣೆ ಕೂಗುತ್ತಾ ಸದನದ ಬಾವಿಗೆ ಇಳಿದರು. ಈ ವೇಳೆ ಪ್ರಧಾನಿ ಮೋದಿ ಮತ್ತು ಸರಕಾರವನ್ನು ಬೆಂಬಲಿಸಿ ಬಿಜೆಪಿ ಸದಸ್ಯರೂ ಘೋಷಣೆ ಕೂಗತೊಡಗಿದಾಗ ಸದನ ಗದ್ದಲದ ಗೂಡಾಯಿತು.

ಈ ಗಲಾಟೆಯ ಮಧ್ಯೆ ಮಾತನಾಡಿದ ಉಪಸಭಾಪತಿ ಪಿ.ಜೆ.ಕುರಿಯನ್ , ನಿಯಮ 267ರ ಪ್ರಕಾರ ನೋಟು ಅಮಾನ್ಯ ನಿರ್ಧಾರದ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಲು ಅವಕಾಶ ಕೋರಿದ ಗೊತ್ತುವಳಿ ಸೂಚನಾ ಪತ್ರ ತಲುಪಿದ್ದು, ನೀವು ಸಿದ್ದರಿದ್ದರೆ ಈ ಗೊತ್ತುವಳಿಯನ್ನು ಅಂಗೀಕರಿಸಬಹುದು ಎಂದರು.

 ಇದಕ್ಕೆ ಉತ್ತರಿಸಿದ ಆಜಾದ್, ಪ್ರಧಾನಿ ಕ್ಷಮೆ ಕೋರಿದರೆ ನಾವು ಈ ಗೊತ್ತುವಳಿಯ ಮೇಲೆ ಚರ್ಚೆಗೆ ಸಿದ್ದರಿದ್ದೇವೆ ಎಂದರು. ನಿನ್ನೆ ಮೋದಿ ರಾಜ್ಯಸಭೆಗೆ ಆಮಿಸಿದಾಗ ವಿಪಕ್ಷದ ಪರವಾಗಿ ನಾನವರನ್ನು ಸ್ವಾಗತಿಸಿದ್ದೆ. ನೋಟು ಅಮಾನ್ಯ ನಿರ್ಧಾರದ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಲು ಬಂದಿದ್ದೀರಾ ಎಂದವರನ್ನು ಪ್ರಶ್ನಿಸಿದ್ದೆ ಎಂದು ಆಜಾದ್ ತಿಳಿಸಿದರು.

 ಇದಕ್ಕೆ ಉತ್ತರಿಸಿದ ಕುರಿಯನ್, ಪ್ರಧಾನಿ ಚರ್ಚೆ ವೇಳೆ ಮಧ್ಯಪ್ರವೇಶಿಸಲಿದ್ದಾರೆ ಎಂದು ಸಚಿವ ಅರುಣ್ ಜೇಟ್ಲೀ ಸದನಕ್ಕೆ ತಿಳಿಸಿದ್ದಾರೆ ಎಂದರು. ಇದಕ್ಕೆ ಒಪ್ಪದ ಆಜಾದ್, ಚರ್ಚೆ ಮುಗಿಯುವವರೆಗೂ ಪ್ರಧಾನಿ ಸದನದಲ್ಲಿ ಉಪಸ್ಥಿತರಿರುತ್ತಾರೆ ಎಂದು ನಮಗೆ ಭರವಸೆ ನೀಡಲಾಗಿದೆ ಎಂದರು. ಬಳಿಕ ಮಾತಾಡಿದ ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯ ಡೆರೆಕ್ ಒ’ಬ್ರಿಯಾನ್, ನಿನ್ನೆ ಚರ್ಚೆ ಸಾಂಗವಾಗಿ ನಡೆದಿದೆ. ಆದರೆ ಇಂದು ಬೆಳಿಗ್ಗೆ ಪ್ರಧಾನಿಯವರು ನೀಡಿದ ಹೇಳಿಕೆಯಲ್ಲಿ ಅವರನ್ನು ಸಂತರ ಹಾಗೆ, ನಮ್ಮನ್ನು ದೆವ್ವದ ಹಾಗೆ ಬಿಂಬಿಸಿದ್ದಾರೆ ಎಂದು ಅಸಮಾಧಾನ ಸೂಚಿಸಿ, ಪ್ರಧಾನಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

   ಮೋದಿ ಗಂಭೀರ ಆರೋಪ ಮಾಡಿರುವ ಕಾರಣ ಅವರು ಕ್ಷಮೆ ಯಾಚಿಸುವ ಅಗತ್ಯವಿದೆ ಎಂದು ಜೆಡಿಯು ಮುಖಂಡ ಶರದ್ ಯಾದವ್ ಹೇಳಿದರು. ಸಮಾಜವಾದಿ ಪಕ್ಷದ ಮುಖಂಡ ರಾಮಗೋಪಾಲ್ ಯಾದವ್ ಇಡೀ ವಿಪಕ್ಷ ಸದಸ್ಯರನ್ನು ಕಪ್ಪುಹಣದ ರಕ್ಷಕರು ಎಂದು ಪ್ರಧಾನಿ ಕರೆದಿದ್ದಾರೆ. ಇದಕ್ಕಿಂತ ದೊಡ್ಡ ಅಪಮಾನ ಬೇರೆ ಯಾವುದಿದೆ ಎಂದು ಪ್ರಶ್ನಿಸಿದರು. ವಿಪಕ್ಷ ಸದಸ್ಯರ ಗದ್ದಲ ಜೋರಾದಾಗ ಕುರಿಯನ್ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು. ಅಪರಾಹ್ನ ಸದನ ಸಮಾವೇಶಗೊಂಡಾಗ ಸಭಾಪತಿ ಹಮೀದ್ ಅನ್ಸಾರಿ ಮೊದಲನೇ ಪ್ರಶ್ನೆಯನ್ನು ಎತ್ತಿಕೊಂಡಾಗ ವಿಪಕ್ಷ ಸದಸ್ಯರು ಮತ್ತೆ ಆಕ್ಷೇಪ ಎತ್ತಿದರು. ಮೋದಿಯವರ ಹೇಳಿಕೆ ಬಗ್ಗೆ ಮತ್ತೊಮ್ಮೆ ಗುಲಾಂ ನಬಿ ಆಜಾದ್ ವಿರೋಧ ಸೂಚಿಸಿದರು. ಮತ್ತೊಮ್ಮೆ ವಿರೋಧ ಪಕ್ಷದವರು ಮೋದಿ ಕ್ಷಮೆ ಯಾಚನೆಗೆ ಆಗ್ರಹಿಸಿ ಘೋಷಣೆ ಕೂಗತೊಡಗಿದರು.

ಗದ್ದಲದ ಮಧ್ಯೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಪ್ರಧಾನಿ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷಗಳು ಕ್ಷಮೆ ಯಾಚಿಸಬೇಕು ಎಂದು ಹೇಳಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ನುಗ್ಗಿ ಘೋಷಣೆ ಮುಂದುವರಿಸಿದರು. ಬಿಜೆಪಿ ಸದಸ್ಯರೂ ಸರಕಾರ ಮತ್ತು ಪ್ರಧಾನಿ ಪರ ಘೋಷಣೆ ಕೂಗಿದಾಗ ಗದ್ದಲ ಜೋರಾಯಿತು. ಈ ವೇಳೆ ಸಭಾಪತಿ ದಿನದ ಕಲಾಪವನ್ನು ನಾಳೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News