ಶರೀಅತ್ ವಿಚಾರದಲ್ಲಿ ಮೂಗು ತೂರಿಸದಿರಿ: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್
ಕಲ್ಲಿಕೋಟೆ, ನ.25: ಶರೀಅತ್ ಎಂಬುದು ಇಸ್ಲಾಂನ ಜೀವನಾಡಿಯಾಗಿದ್ದು, ಶರೀಅತ್ ವಿಚಾರದಲ್ಲಿ ಸರಕಾರ ಮೂಗು ತೂರಿಸಬಾರದು ಎಂದು ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.
ಅವರು ಶುಕ್ರವಾರ ಕಲ್ಲಿಕೋಟೆಯಲ್ಲಿ ನಡೆದ ಎಸವೈಎಸ್ ಶರೀಅತ್ ಹಕ್ಕು ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯ ಪ್ರಭಾಷಣ ಮಾಡಿ ಮಾತನಾಡಿದರು.
ಭಾರತವು ಪ್ರಜಾಪ್ರಭುತ್ವ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಜಗತ್ತಿನ ಶ್ರೇಷ್ಠ ರಾಷ್ಟ್ರವಾದ ಭಾರತದಲ್ಲಿ ಇದೀಗ ಶರೀಅತ್ ವಿಚಾರವಾಗಿ ಜನರಲ್ಲಿ ಅನಗತ್ಯ ಗೊಂದಲವುಂಟಾಗುತ್ತಿದೆ. ಶರೀಅತ್ ಬಗ್ಗೆ ಮಾತನಾಡುವ ಯಾವ ಅವಕಾಶವೂ ಸರಕಾರಕ್ಕಿಲ್ಲ. ಸಂವಿಧಾನ ಶಿಲ್ಪಿಅಂಬೇಡ್ಕರ್ ನಿರ್ಮಿಸಿದ ಸಂವಿಧಾನವನ್ನು ಯಥಾವತ್ತಾಗಿ ಪಾಲಿಸಲು ಸರಕಾರ ಮುಂದಾಗಬೇಕೆಂದು ತಿರುಗೇಟ ನೀಡಿದರು.
ಇದಕ್ಕೂ ಮೊದಲು ಸಯ್ಯದ್ ಯೂಸುಫ್ ಜೀಲಾನಿ ಧ್ವಜಾರೋಹಣಗೈದು ಸಮಾವೇಶಕ್ಕೆ ಚಾಲನೆಯಿತ್ತರು. ಸಯ್ಯದ್ ಅಲಿ ಬಾಫಖಿ ತಂಙಳ್ ದುಆ ನೆರವೇರಿಸಿದರು. ಸಮಸ್ತ ಅಧ್ಯಕ್ಷ ಈಸುಲ್ ಉಲಮಾ ಇ. ಸುಲೈಮಾನ್ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯದ್ ಇಬ್ರಾಹೀಂ ಖಲೀಲುಲ್ ಬುಖಾರಿ ಉದ್ಘಾಟಿಸಿದರು.
ಎಸ್ವೈಎಸ್ ರಾಜ್ಯಾಧ್ಯಕ್ಷ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮರ್ಕಝ್ ಮ್ಯಾನೇಜರ್ ಸಿ.ಮುಹಮ್ಮದ್ ಫೈಝಿ, ಸಂಸದ ಎಂ.ಕೆ ರಾಘವನ್, ಡಾ.ಥಾಮಸ್ ಪಣಕ್ಕಲ್, ಸ್ವಾಮಿ ವಿಶ್ವೇಂದ್ರ ಶಕ್ತಭೋದಿ, ಅಡ್ವೊಕೇಟಕೆ.ಎನ್. ಖಾದರ್, ಕೆ.ಟಿ. ಕುಂಞಿಕನ್ನುರ್ ಮುಂತಾದವರು ಸಂದೇಶ ಭಾಷಣ ಮಾಡಿದರು. ವೇದಿಕೆಯಲ್ಲಿ ಧಾರ್ಮಿಕ ಸಾಮಾಜಿಕ ಗಣ್ಯರು ಉಪಸ್ಥಿತರಿದ್ದರು. ಸಮಾರಂಭಕ್ಕೆ ಸಹಸ್ರಾರು ಜನರು ಸಾಕ್ಷಿಯಾದರು.