ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಪ್ರೊ. ಹರಿನಾರಾಯಣ ಮಾಡಾವು

Update: 2016-11-26 12:35 GMT

ಪುತ್ತೂರು,ನ.26: ಪುತ್ತೂರು ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ದ.30ರಂದು ಪೆರ್ಲಂಪಾಡಿ ಷಣ್ಮುಖದೇವ ಪ್ರೌಢ ಶಾಲೆಯಲ್ಲಿ ನಡೆಯಲಿದ್ದು, ಸಮ್ಮೇಳನ ಅಧ್ಯಕ್ಷರಾಗಿ ಸಾಹಿತಿ ಪ್ರೊ. ಹರಿನಾರಾಯಣ ಮಾಡಾವು ಅವರು ಆಯ್ಕೆಯಾಗಿದ್ದಾರೆ.

ಪುತ್ತೂರಿನ ಅನುರಾಗ ವಠಾರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿಣಿ ಸಭೆಯಲ್ಲಿ ಪ್ರೊ. ಹರಿನಾರಾಯಣ ಮಾಡಾವು ಅವರ ಹೆಸರನ್ನು ಸಮ್ಮೇಳನಾಧ್ಯಕ್ಷತೆಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪುತ್ತೂರು ಸಂತ ಫಿಲೋಮಿನಾ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಪ್ರೊ. ಹರಿನಾರಾಯಣ ಮಾಡಾವು ಅವರ ಹಲವು ಲೇಖನ, ಕವನ, ವಿಮರ್ಶೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

ಅಂಗರಾಗ (ಕವನ ಸಂಕಲನ), ಮದರ್ ತೆರೆಸಾ(ಜೀವನ ಚರಿತ್ರೆ), ಗುಟುಕು, ನಗುವ ನಾವು, ನಾಯಿಯ ನಡತೆ(ಗದ್ಯ) ಅವರ ಪ್ರಕಟಿತ ಕೃತಿಗಳು

ಕರ್ಣ ಚರಿತೆ, ಅರಳು, ಅಭಿರುಚಿ, ಮೌಲ್ಯ ಶಿಕ್ಷಣ ಅನುವಾದಿತ ಕೃತಿಗಳು. ಈ ಪೈಕಿ ಮೌಲ್ಯ ಶಿಕ್ಷಣ, ಮದರ್ ತೆರೆಸಾ, ಕರ್ಣಚರಿತೆ ಪಿಯುಸಿ, ಪದವಿ, ಮೆಟ್ರಿಕ್ಯುಲೇಶನ್ ತರಗತಿಗಳಿಗೆ ಅಧ್ಯಯನಕ್ಕಾಗಿ ಆಯ್ಕೆಯಾಗಿರುವ ಕೃತಿಗಳು.

ಖ್ಯಾತ ಕವಿ ಸುಬ್ಯಾಯ ಚೊಕ್ಕಾಡಿ ಅವರು ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಪುಸ್ತಕ ಬಿಡುಗಡೆಗೆ ಅವಕಾಶ:

ಪುತ್ತೂರು ತಾಲೂಕು 16ನೆಯ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದ್ದು, ಕವಿಗಳು, ಸಾಹಿತಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕಿ ಅವರ ದೂರವಾಣಿ ಸಂಖ್ಯೆ 9449030872 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News