ನ್ಯಾಯಾಧೀಶರ ನೇಮಕ ವಿಳಂಬ
ಹೊಸದಿಲ್ಲಿ, ನ.26: ನ್ಯಾಯಮೂರ್ತಿಗಳ ನೇಮಕದ ವಿಚಾರವನ್ನು ಅಡಿಗೆ ಹಾಕಿ ಕುಳಿತಿರುವುದಕ್ಕಾಗಿ ಕೇಂದ್ರ ಸರಕಾರವನ್ನಿಂದು ಕಠಿಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ಇಂದು ಹೈಕೋರ್ಟ್‌ಗಳಲ್ಲಿ ಸುಮಾರು 500 ನ್ಯಾಯಮೂರ್ತಿಗಳ ಸ್ಥಾನಗಳು ತೆರವಾಗಿಯೇ ಇವೆಯೆಂದು ಹೇಳಿದ್ದಾರೆ.
ಹೈಕೋರ್ಟ್‌ಗಳಲ್ಲಿಂದು ಸುಮಾರು 500 ಸ್ಥಾನಗಳು ತೆರವಾಗಿವೆ. 500 ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳು ಇಂದು ಕೆಲಸ ಮಾಡಬೇಕಿತ್ತು. ಆದರೆ, ಕೆಲಸ ಮಾಡುತ್ತಿಲ್ಲ. ನ್ಯಾಯಾಧಿಕರಣಗಳಿಗೆ ಮೂಲ ಸೌಕರ್ಯದ ಕೊರತೆಯಿದೆ. ಅದರಿಂದಾಗಿ ಅವುಗಳಲ್ಲಿ ಹಲವು ಬರಿದಾಗಿವೆಯೆಂದು ಅವರು ದಿಲ್ಲಿಯಲ್ಲಿ ತಿಳಿಸಿದ್ದಾರೆ.
ಸರಕಾರವು ಸೂಕ್ತ ವ್ಯವಸ್ಥೆ ಕಲ್ಪಿಸಲು ಸಿದ್ಧವಿಲ್ಲ. ಹುದ್ದೆ ತೆರವು ಹಾಗೂ ಮೂಲ ಸೌಲಭ್ಯದ ಕೊರತೆ ನ್ಯಾಯಾಧಿಕರಣಗಳಿಗೆ ಚಿಂತೆಯ ವಿಷಯವಾಗಿದೆ. ನ್ಯಾಯಾಧಿಕರಣಗಳಿಗೆ ಸಾಧನ-ಸಲಕರಣೆಗಳಿಲ್ಲ. ಹಾಗಾಗಿ ಬರಿದಾಗಿವೆ. ಯಾವನೇ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನ್ಯಾಯಾಧಿಕರಣವೊಂದರ ನೇತೃತ್ವ ವಹಿಸದಂತಹ ಸ್ಥಿತಿ ಉದ್ಭವಿಸಿದೆ. ಹುದ್ದೆಗಳು ತೆರವಾಗಿವೆ. ಈ ಹುದ್ದೆಗಳನ್ನು ವಹಿಸಿಕೊಳ್ಳುವಂತೆ ನಿವೃತ್ತಿಯಾಗುತ್ತಿರುವ ಸಹೋದ್ಯೋಗಿಗಳ ಮನವೊಲಿಸುವ ಸಂಕಷ್ಟ ತನಗೆ ಬಂದಿದೆಯೆಂದು ಠಾಕೂರ್ ನೋವು ತೋಡಿಕೊಂಡಿದ್ದಾರೆ.
ಆದರೆ, ಇದನ್ನೊಪ್ಪದ ಕೇಂದ್ರ ಕಾನೂನು ಸಚಿವ ರವಿಶಂಕರ್, ಸರಕಾರವು ಈ ವರ್ಷ 120 ನೇಮಕಾತಿಗಳನ್ನು ಮಾಡಿದೆ. ತಾವು ಮುಖ್ಯ ನ್ಯಾಯಮೂರ್ತಿಯ ಮಾತನ್ನು ಗೌರವದಿಂದಲೇ ತಿರಸ್ಕರಿಸುತ್ತಿದ್ದೇವೆ. 1990 ರಿಂದೀಚೆಗೆ ಕೇವಲ 80 ನೇಮಕಾತಿಗಳಾಗಿದ್ದವು. ತಾವು ಈ ವರ್ಷ 120 ನೇಮಕಾತಿಗಳನ್ನು ಮಾಡಿದ್ದೇವೆ. ಭಾರತ ಸರಕಾರದ ಪಾತ್ರವಿರದ ಕೆಳ ನ್ಯಾಯಾಲಯಗಳಲ್ಲಿ 5 ಸಾವಿರ ಹುದ್ದೆಗಳು ಖಾಲಿಯಿವೆ. ಅದನ್ನು ನ್ಯಾಯಾಂಗವೇ ಭರ್ತಿ ಮಾಡಬೇಕಾಗಿದೆ. ಮೂಲಸೌಕರ್ಯದ ಬಗ್ಗೆ ಹೇಳಬೇಕಾದರೆ ಅದೊಂದು ಸತತ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.