ರಾಜಧಾನಿಯಲ್ಲೇ ನೋಟಿಗೆ ತತ್ವಾರ!

Update: 2016-11-27 04:05 GMT

ಗೋಯೆಲಾ ಖುರ್ದ್, ನ.27: ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರೂಪಾಯಿ ನೋಟುಗಳ ಚಲಾವಣೆ ರದ್ದುಪಡಿಸುವ ನಿರ್ಧಾರ ಪ್ರಕಟಿಸಿ ಮೂರು ವಾರವಾಗುತ್ತಾ ಬಂದರೂ ಜನರ ಬವಣೆ ಮಾತ್ರ ಕಡಿಮೆಯಾಗಿಲ್ಲ. ರಾಜಧಾನಿ ಹೊರವಲಯದ ರೂರ್ಬಾನ್ ಗ್ರಾಮದ ಕಥೆಯನ್ನೇ ಕೇಳಿ. ಗ್ರಾಮದಲ್ಲಿ ಇರುವ ಏಕೈಕ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್. ಇಲ್ಲಿ ನಗದು ಇಲ್ಲದೇ ಜನ ಪರದಾಡುವಂತಾಗಿದೆ. ಇಡೀ ದಿನ ಬ್ಯಾಂಕಿನ ಮುಂದೆ ಉದ್ದುದ್ದ ಸಾಲು ಕಾಣಿಸುತ್ತದೆ. ಆರ್‌ಬಿಐ ಕರೆನ್ಸಿ ಚೆಸ್ಟ್‌ನಿಂದ ನಗದು ಪೂರೈಕೆಯಾಗುತ್ತಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ತೀರಾ ಸಮೃದ್ಧವಾಗಿದ್ದ ಈ ಗ್ರಾಮದಲ್ಲಿ ಈಗ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದು, ಗ್ರಾಹಕರ ಹತಾಶೆ ಹಾಗೂ ಸಿಟ್ಟಿಗೆ ಬ್ಯಾಂಕ್ ಸಿಬ್ಬಂದಿ ಗುರಿಯಾಗುತ್ತಿದ್ದಾರೆ. ಕಳೆದ ಹದಿನೈದು ದಿನಗಳಿಂದ ಖಾತೆಯಿಂದ ಹಣ ಪಡೆಯುವ ಸಲುವಾಗಿ ಪ್ರತಿದಿನ ಸರದಿಯಲ್ಲಿ ನಿಲ್ಲುತ್ತಿರುವುದಾಗಿ ಖೊಕೊನ್ ದಲೈ ಹೇಳುತ್ತಾರೆ. ಐದಾರು ಗಂಟೆ ಸರದಿಯಲ್ಲಿ ನಿಂತರೂ ಹಣ ಸಿಗದ ಪರಿಸ್ಥಿತಿ ಇದೆ. ಕೆಲ ದಿನ ನಗದು ಬ್ಯಾಂಕಿಗೆ ಬರುವುದೇ ಇಲ್ಲ. ಬಂದರೂ ಅರ್ಧ ಗಂಟೆಯಲ್ಲಿ ಖಾಲಿಯಾಗುತ್ತದೆ. ಅಕ್ಕಪಕ್ಕದ ಎಟಿಎಂ ಕೂಡಾ ಸ್ತಬ್ಧವಾಗಿದೆ. 2000 ರೂಪಾಯಿ ಪಡೆಯುವ ಸಲುವಾಗಿ 20 ಕಿಲೋಮೀಟರ್ ದೂರದ ಲಜಪತ್‌ನಗರಕ್ಕೆ ಹೋಗಬೇಕಾಯಿತು ಎಂದು ಅವರು ವಿವರಿಸಿದರು.
ಇಂಥ ಆರೋಪವನ್ನು ಗ್ರಾಮದ ಹಲವು ಮಂದಿ ಮಾಡಿದರು. ದಿನಗೂಲಿಗಳು, ಪೆಯಿಂಟ್ ಕೆಲಸ ಮಾಡುವವರು, ಸಣ್ಣ ಗುತ್ತಿಗೆದಾರರು, ನಿವೃತ್ತ ಸಿಬ್ಬಂದಿ, ಮಹಿಳೆಯರು, ಪುರುಷರು, ಹಿರಿಯ ನಾಗರಿಕರು ಸಣ್ಣ ಮೊತ್ತಕ್ಕಾಗಿ ದಿನವಿಡೀ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News