ನೋಟು ನಿಷೇಧ ವಿರುದ್ಧ ನಾಳೆ ಪ್ರತಿಭಟನೆ ಮಾತ್ರ, ಭಾರತ ಬಂದ್ ಇಲ್ಲ:ಕಾಂಗ್ರೆಸ್ ಸ್ಪಷ್ಟನೆ

Update: 2016-11-27 10:37 GMT

ಹೊಸದಿಲ್ಲಿ,ನ.27: ತಾನು ನಾಳೆ,ಸೋಮವಾರ ಭಾರತ ಬಂದ್‌ಗೆ ಕರೆ ನೀಡಿಲ್ಲ, ಆದರೆ ನೋಟು ನಿಷೇಧವನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸುವುದಾಗಿ ಕಾಂಗ್ರೆಸ್ ಇಂದು ಸ್ಪಷ್ಟಪಡಿಸಿದೆ. ನೋಟು ನಿಷೇಧವು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಸೋಗಿನಲ್ಲಿ ಕೈಗೊಳ್ಳಲಾಗಿರುವ ರಾಜಕೀಯ ನಡೆಯಾಗಿದೆ ಎಂದು ಅದು ಇದೇ ವೇಳೆ ಆಪಾದಿಸಿದೆ.

 ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ ಅವರು, ಪ್ರಧಾನಿ ನರೇಂದ್ರ ಮೋದಿಯವರು ‘ಧಮಾಕಾ’ ರಾಜಕೀಯವನ್ನು ನಂಬಿ ಕೊಂಡಿದ್ದಾರೆ ಮತ್ತು ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಗೋಡೆಯ ಮೇಲಿನ ಬರಹದಂತೆ ಮನಗಂಡಿ ರುವುದರಿಂದ ಅವರು 500 ಮತ್ತು 1,000 ರೂ.ನೋಟುಗಳನ್ನು ನಿಷೇಧಿಸುವ ನಿರ್ಧಾರ ವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ವಿದೇಶಗಳಲ್ಲಿ ಬಚ್ಚಿಟ್ಟಿರುವ ಕಪ್ಪುಹಣವನ್ನು ವಾಪಸ್ ತರುವುದಾಗಿ ಕೊಚ್ಚಿಕೊಂಡಿದ್ದ ಪ್ರಧಾನಿಯವರ ಭರವಸೆಗಳನ್ನು ಈಡೇರಿಸುವಲ್ಲಿ ಸರಕಾರದ ವೈಫಲ್ಯವನ್ನು ಮುಚ್ಚಿ ಕೊಳ್ಳಲು ಮತ್ತು ಏನಾದರೂ ’ನಾಟಕೀಯ’ವಾದದ್ದನ್ನು ಮಾಡಲು ಮೋದಿಯವರು ಬಯಸಿದ್ದರಿಂದ ದೊಡ್ಡ ನೋಟುಗಳನ್ನು ರದ್ದುಗೊಳಿಸಲಾಗಿದೆ ಎಂದ ಅವರು,ಇದು ಭ್ರಷ್ಟಾಚಾರದ ವಿರುದ್ಧ ಹೋರಾಟದ ಸೋಗಿನಲ್ಲಿಯ ರಾಜಕೀಯ ನಡೆಯಾಗಿದೆ ಎಂದು ಟೀಕಿಸಿದರು.

ವಾಮಮಾರ್ಗಗಳ ಮೂಲಕ ಸಂಪತ್ತನ್ನು ಗುಡ್ಡೆ ಹಾಕಿರುವವರಿಗೆ ನೋಟು ನಿಷೇಧ ದಿಂದ ಯಾವುದೇ ತೊಂದರೆಯಾಗಿಲ್ಲ,ಆದರೆ ಯಾವುದೇ ಕಪ್ಪುಹಣ ಹೊಂದಿರದವರು ಸಂಕಷ್ಟಗಳನ್ನೆದುರಿಸುತ್ತಿದ್ದಾರೆ ಎಂದ ಅವರು, ದುರದೃಷ್ಟವಶಾತ್ ಯಾರ ವಿರುದ್ಧ ದಾಳಿಯ ಅಗತ್ಯವಿತ್ತೋ ಅವರು ಪಾರಾಗಿಬಿಟ್ಟಿದ್ದಾರೆ. ‘ಸೂಟು-ಬೂಟಿನ’ ಒಂದು ವರ್ಗ ಈಗಲೂ ಐಷಾರಾಮಿ ಜೀವನವನ್ನು ನಡೆಸುತ್ತಿದೆ ಎಂದರು.

ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಭಾರತ ಬಂದ್‌ಗೆ ಕರೆ ನೀಡಿವೆ ಎಂಬ ತಪ್ಪು ಮಾಹಿತಿಯನ್ನು ಬಿಜೆಪಿಯು ಹರಡುತ್ತಿದೆ ಎಂದು ಆರೋಪಿಸಿದ ಅವರು, ಪ್ರತಿಪಕ್ಷಗಳು ‘ಜನ ಆಕ್ರೋಶ ದಿವಸ್’ ಆಚರಿಸುವ ಮೂಲಕ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಲಿವೆ ಎಂದು ಹೇಳಿದರು.

ಮೋದಿ ಸರಕಾರವನ್ನು ತರಾಟೆಗೆತ್ತಿಕೊಂಡ ಅವರು, ನ.8ರ ಬಳಿಕ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದರು.

 ಸಂಸತ್ತಿನಲ್ಲಿ ಪ್ರತಿಪಕ್ಷ ಕಾರ್ಯತಂತ್ರ ಕುರಿತ ಪ್ರಶ್ನೆಗೆ ರಮೇಶ ಅವರು, ಪ್ರಧಾನಿ ಯವರು ಭಾಗವಹಿಸಿದರೆ ನೋಟು ನಿಷೇಧ ಕುರಿತು ಚರ್ಚೆ ನಡೆಯುತ್ತದೆ ಎಂದು ಉತ್ತರಿಸಿದರು.

‘ನಗದು ರಹಿತ’ ಅಥವಾ ‘ಕಡಿಮೆ ಹಣ’ದ ಸಮಾಜಕ್ಕಾಗಿ ಮೋದಿಯವರ ಕರೆಯನ್ನು ಟೀಕಿಸಿದ ಅವರು,ಭಾರತದಲ್ಲಿ ಹೆಚ್ಚಿನ ಜನರು ದೈನಂದಿನ ವ್ಯವಹಾರದಲ್ಲಿ ನಗದು ಹಣ ವನ್ನೇ ಬಳಸುತ್ತಾರೆ. ಇಂತಹ ವಿಷಯಗಳಿಗೆ ಸಮಯವಕಾಶ ಅಗತ್ಯವಿದ್ದು,ಆಘಾತಗಳ ಮೂಲಕ ಬಲವಂತದಿಂದ ಹೇರುವಂತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News