×
Ad

ಸಿರಿಯದಲ್ಲಿ: ಐಸಿಸ್‌ನಿಂದ ವಿಷಾನಿಲ ಪ್ರಯೋಗ?

Update: 2016-11-27 19:56 IST

ಇಸ್ತಾಂಬುಲ್,ನ.27: ಉತ್ತರ ಸಿರಿಯದಲ್ಲಿ ಐಸಿಸ್ ಉಗ್ರರು 22ಕ್ಕೂ ಅಧಿಕ ವಿರೋಧಿ ಬಂಡುಕೋರರ ಮೇಲೆ ನಡೆಸಿದ ರಾಕೆಟ್ ದಾಳಿಗಳಲ್ಲಿ ರಾಸಾಯನಿಕ ಅನಿಲಗಳನ್ನು ಪ್ರಯೋಗಿಸಿರುವ ಕುರುಹುಗಳು ಕಂಡುಬಂದಿದೆಯೆಂದು ಟರ್ಕಿ ಸೇನೆಯ ಹೇಳಿಕೆಯನ್ನು ಉಲ್ಲೇಖಿಸಿ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

ತಮ್ಮ ನಿಯಂತ್ರಣದಲ್ಲಿರುವ ಅಲ್-ಬಾಬ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವ ಟರ್ಕಿ ಬೆಂಬಲಿತ ಬಂಡುಕೋರರನ್ನು ಗುರಿಯಾಗಿರಿಸಿ ಐಸಿಸ್ ಉಗ್ರರು ಈ ದಾಳಿಯನ್ನು ನಡೆಸಿದ್ದಾರೆ. ಟರ್ಕಿ ಗಡಿಗೆ ತಾಗಿಕೊಂಡಿರುವ ಸಿರಿಯದ ಪ್ರದೇಶಗಳಲ್ಲಿರುವ ಐಸಿಸ್ ಉಗ್ರರನ್ನು ಹಿಮ್ಮೆಟ್ಟಿಸಲು, ಟರ್ಕಿ ಸೇನೆಯು ಬಂಡುಕೋರರ ಬೆಂಬಲದೊಂದಿಗೆ 'ಯುಫ್ರಟಿಸ್ ಶೀಲ್ಡ್' ಹೆಸರಿನಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಐಸಿಸ್ ಹಾಲಿಲಿಯೆ ಪ್ರದೇಶದಲ್ಲಿ ರಾಕೆಟ್ ದಾಳಿಯನ್ನು ನಡೆಸಿದೆಯೆಂದು ಟರ್ಕಿ ಸರಕಾರಿ ಸ್ವಾಮ್ಯದ ಅನಾದೊಲು ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ದಾಳಿ ನಡೆದ ಸ್ಥಳದ ಬಗ್ಗೆ ಸೇನೆಯಿಂದ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಐಸಿಸ್ ನಡೆಸಿದ ರಾಕೆಟ್ ದಾಳಿಯಲ್ಲಿ 22 ಮಂದಿ ಬಂಡುಕೋರರ ಕಣ್ಣುಗಳು ಹಾಗೂ ದೇಹಗಳು ರಾಸಾಯನಿಕ ಅನಿಲದಿಂದ ಬಾಧಿತವಾಗಿವೆಯೆಂದು ಟರ್ಕಿ ಸೇನೆಯ ಹೇಳಿಕೆ ತಿಳಿಸಿದೆ.

ಶಂಕಿತ ವಿಷಾನಿಲ ದಾಳಿಗೆ ಸಿಲುಕಿದ ಬಂಡುಕೋರರಿಗೆ ಟರ್ಕಿಯ ಗಡಿಪ್ರಾಂತ್ಯವಾದ ಕಿಲಿಸ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಸಾಯನಿಕ ದಾಳಿ ನಡೆದಿರುವ ಬಗ್ಗೆ ಕುರುಹುಗಳನ್ನು ಪರಿಶೀಲಿಸಲು ಟರ್ಕಿಯ ಎಎಫ್‌ಎಡಿ ತುರ್ತು ಪರಿಹಾರ ತಂಡಗಳು ಅವರನ್ನು ತಪಾಸಣೆಗೊಳಪಡಿಸಿದೆಯೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News