ದೇಶದ ಆರ್ಥಿಕ ರಾಜಧಾನಿ ಪಟ್ಟ ಕಳಕೊಂಡ ಮುಂಬೈ !
ಮುಂಬೈ, ನ. 28: ವಿಶ್ವದ ಅಗ್ರ 50 ಮೆಟ್ರೊಪಾಲಿಟನ್ ವಾಣಿಜ್ಯ ಕೇಂದ್ರಗಳಲ್ಲಿ ಮುಂಬೈ 31ನೇ ಸ್ಥಾನ ಪಡೆದಿದೆ. ಆದರೆ ಈ ಸಂಭ್ರಮದ ಮಧ್ಯೆಯೂ ಮುಂಬೈಗೆ ಇದೀಗ ಬೇಸರದ ಸಂಗತಿಯೊಂದಿದೆ. ಕಾರಣ ಏನು ಗೊತ್ತೇ? ದೇಶದ ಆರ್ಥಿಕ ರಾಜಧಾನಿ ಎಂಬ ಕಿರೀಟ ಇದೀಗ ಮುಂಬೈ ಕೈಜಾರಿದೆ. ರಾಜಧಾನಿ ದಿಲ್ಲಿ ಇದೀಗ ಆರ್ಥಿಕ ರಾಜಧಾನಿ ಪಟ್ಟವನ್ನೂ ಅಲಂಕರಿಸಿದೆ.
ಆಕ್ಸ್‌ಫರ್ಡ್ ಎಕನಾಮಿಕ್ಸ್ ಬಿಡುಗಡೆ ಮಾಡಿದ 2015ನೇ ಸಾಲಿನ ವರದಿಯಲ್ಲಿ ಈ ಅಂಶ ಬಹಿರಂಗಾಗಿದೆ. 200 ದೇಶಗಳ 100 ಕೈಗಾರಿಕಾ ವಲಯಗಳ ಬಗ್ಗೆ 3000 ನಗರಗಳಲ್ಲಿ ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. ಹೊಸ ವಿಶ್ಲೇಷಣೆಯ ಅನ್ವಯ, ಮುಂಬೈ ಮಹಾನಗರ ಇದೀಗ ಮುಂಬೈ, ನವಿ ಮುಂಬೈ, ಥಾಣೆ, ವಸಾಯ್ ವಿರಾರ್, ಭಿವಂಡಿ ಹಾಗೂ ಪನ್ವೇಲ್ ವರೆಗೂ ಬೆಳೆದಿದ್ದು, ಈ ಮಹಾನಗರದ ಜಿಡಿಪಿ 368 ಶತಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಜನರ ಖರೀದಿ ಶಕ್ತಿ ಡಾಲರ್‌ಗೆ 15.5 ರೂಪಾಯಿ ಪ್ರಮಾಣದಲ್ಲಿದೆ.
ಹೊಸ ವಾಣಿಜ್ಯ ರಾಜಧಾನಿ ದಿಲ್ಲಿಯಲ್ಲಿ ದಿಲ್ಲಿ ಎನ್‌ಸಿಆರ್, ಗುರುಗಾಂವ್, ಫರೀದಾಬಾದ್, ನೋಯ್ಡ ಹಾಗೂ ಗಾಜಿಯಾಬಾದ್ ಸೇರಿದ್ದು, ಜಿಡಿಪಿ ಪ್ರಮಾಣ 370 ಶತಕೋಟಿ ಡಾಲರ್. ಜಾಗತಿಕ ರ್ಯಾಂಕಿಂಗ್‌ನಲ್ಲಿ ದಿಲ್ಲಿ 30ನೇ ಸ್ಥಾನದಲ್ಲಿದೆ.