ಕೊಕಕೋಲಾ ಕುಡಿದ ಮೇಲೆ ನಿಮ್ಮ ದೇಹದಲ್ಲಿ ಏನೇನಾಗುತ್ತದೆ ನೋಡಿ
ಹೊಸದಿಲ್ಲಿ, ನ.28: ಕೊಕಕೋಲಾ ತಂಪು ಪಾನೀಯ ಹಲವು ಮಂದಿಗೆ ಇಷ್ಟ. ಆದರೆ ಇದನ್ನು ಕುಡಿದ ನಂತರ ಅದು ನಮ್ಮ ದೇಹದ ಮೇಲೆ ಬೀರುವ ಪರಿಣಾಮಗಳೇನೆಂಬುದನ್ನು ಭಾರತೀಯ ವಿಜ್ಞಾನಿಯೊಬ್ಬರು ಪಟ್ಟಿ ಮಾಡಿದ್ದಾರೆ ಹಾಗೂ ಅದು ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ತಮ್ಮ ಬ್ಲಾಗ್ ಟ್ರುತ್ ಸ್ಟೋರಿಯಲ್ಲಿ ನೀರಜ್ ನಾಯ್ಕ್ ಅವರು ಕೊಕಾಕೋಲಾದ ದುಷ್ಪರಿಣಾಮಗಳನ್ನು ವಿವರಿಸಿದ್ದಾರೆ. ಅವು ಹೀಗಿವೆ.
ನೀವು ಕೊಕಕೋಲಾ ಕುಡಿದು 10 ನಿಮಿಷಗಳಾಯಿತು ಎಂದಿಟ್ಟುಕೊಳ್ಳಿ. ಅಷ್ಟರೊಳಗಾಗಿ ಈವು 10 ಟೀಸ್ಪೂನ್ ಸಕ್ಕರೆ ಸೇವಿಸಿದಂತೆ (ಪ್ರತಿ ದಿನ ನಿಮಗೆ ಶಿಫಾರಸು ಮಾಡಲಾದ ಸಕ್ಕರೆ ಸೇವನೆ ಪ್ರಮಾಣ ಶೇ 100 ರಷ್ಟು ಪೂರ್ತಿಯಾದಂತೆಯೇ ಸರಿ). ಕೊಕಕೋಲಾದಲ್ಲಿರುವ ಸಿಹಿಯ ಪ್ರಮಾಣ ಯಾರೇ ಆದರೂ ವಾಂತಿ ಮಾಡುವಷ್ಟಿದ್ದರೂ, ಅದರಲ್ಲಿರುವ ಫೋಸ್ಪೋರಿಕ್ ಆಸಿಡ್ ಈ ಸಿಹಿಯ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಹಿಡಿತದಲ್ಲಿಡುತ್ತದೆ.
ಕೊಕಕೋಲಾ ಸೇವಿಸಿ 20 ನಿಮಿಷಗಳಾಗುವಷ್ಟರಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ವಿಪರೀತಕ್ಕೆ ಹೋಗಿ ಇನ್ಸುಲಿನ್ ಹೆಚ್ಚಾಗಿ ಲಿವರ್ ಸಕ್ಕರೆಯನ್ನು ಕೊಬ್ಬನ್ನಾಗಿ ಪರಿವರ್ತಿಸುತ್ತದೆ. ನಲ್ವತ್ತು ನಿಮಿಷಗಳೊಳಗಾಗಿ ಕೆಫೀನ್ ದೇಹದೊಳಕ್ಕೆ ಸಂಪೂರ್ಣವಾಗಿ ಸೇರಿಕೊಂಡು ನಿಮ್ಮ ಕಣ್ಣಾಲಿಗಳು ಕುಗ್ಗಿ, ರಕ್ತದೊತ್ತಡ ಹೆಚ್ಚಾಗಿ ಲಿವರ್ ಹೆಚ್ಚು ಸಕ್ಕರೆಯ ಪ್ರಮಾಣವನ್ನು ರಕ್ತದಲ್ಲಿ ಪಸರಿಸುತ್ತದೆ.ಮೆದುಳಿನಲ್ಲಿರುವ ಅಡೆನೊಸಿನ್ ರಿಸೆಪ್ಟರ್ ಗಳು ಬ್ಲಾಕ್ ಆಗಿ ಅಮಲನ್ನು ನಿವಾರಿಸುತ್ತದೆ.
45 ನಿಮಿಷಗಳ ನಂತರ ದೇಹದ ಡೊಪಮೈನ್ ಉತ್ಪಾದನೆ ಹೆಚ್ಚಾಗಿ ಮೆದುಳನ್ನು ಸಕ್ರಿಯಗೊಳಿಸುತ್ತದೆ. ಹೆರಾಯಿನ್ ಇದೇ ರೀತಿ ಕಾರ್ಯನಿರ್ವಹಿಸುತ್ತದೆ. ಇದಾದ ಒಂದು ಗಂಟೆಯ ನಂತರ ಎಲ್ಲವೂ ತಣ್ಣಗಾಗಿ ಮನುಷ್ಯನ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಕುಂಠಿತವಾಗುತ್ತದೆ.
ಕೊಬ್ಬಿನಂಶ ಕಡಿಮೆಯಿರುವ ಆಹಾರ ಸೇವಿಸುವವರ ದೇಹತೂಕ ಹೆಚ್ಚಾಗುತ್ತಿದ್ದುದನ್ನು ಗಮನಿಸಿ ನಾಯ್ಕ್ ಅವರು ಅದಕ್ಕೆ ಕಾರಣವೇನೆಂದು ತಿಳಿಯಲು ಕೋಕ್ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಿದ್ದರು. ಅವರು ಹೇಳುವಂತೆ ಫ್ರುಕ್ಟೋಸ್ ವಾಸ್ತವವಾಗಿ ಹಲವಾರು ಸಂಸ್ಕರಿತ ಆಹಾರಗಳಲ್ಲಿ ಹೈ ಫ್ರುಕ್ಟೋಸ್ ಕಾರ್ನ್ ಸಿರಪ್ ರೂಪದಲ್ಲಿರುವುದರಿಂದ ಹೆಚ್ಚಿನ ಜನರು ಅದು ದೇಹದ ಮೇಲೆ ಬೀರಬಲ್ಲ ಪರಿಣಾಮದ ಬಗ್ಗೆ ತಿಳಿದಿಲ್ಲವೆನ್ನುತ್ತಾರೆ ಅವರು.
ವಿಶ್ವದಾದ್ಯಂತ ಪ್ರತಿ ದಿನ 1.6 ಬಿಲಿಯನ್ ಬಾಟಲಿ ಕೋಕ್ ಅನ್ನು ಜನ ಸೇವನೆ ಮಾಡುತ್ತಾರೆಂದು ಹೇಳುವ ಅವರು ಜನರು ತಮ್ಮ ಹೃದಯ, ಆರೋಗ್ಯ ಹಾಗು ಮನಸ್ಸಿನ ಬಗ್ಗೆ ಕಾಳಜಿ ಹೊಂದಿದ್ದೇ ಆದಲ್ಲಿ ಅವರು ಕೋಕ್ ಬಾಟಲಿಯನ್ನು ಕೈಗೆತ್ತಿಕೊಳ್ಳಬಾರದು ಎಂದು ಹೇಳುತ್ತಾರೆ