ಬದಿಯಡ್ಕ: ಇಬ್ಬರು ಪುಟಾಣಿ ಮಕ್ಕಳು ಬಾವಿಗೆ ಬಿದ್ದು ಮೃತ್ಯು

Update: 2016-11-29 08:28 GMT

ಕಾಸರಗೋಡು, ನ.29: ಮನೆಯಂಗಳದಲ್ಲಿ ಆಟ ಆಡುತ್ತಿದ್ದ ಇಬ್ಬರು ಪುಟಾಣಿ ಮಕ್ಕಳು ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಮಂಗಳವಾರ ಬೆಳಗ್ಗೆ ಬದಿಯಡ್ಕ ಸಮೀಪದ ಪಿಲಾಂ ಕಟ್ಟೆಯಲ್ಲಿ ನಡೆದಿದೆ. ಬಾವಿಕ್ಕರೆಯಲ್ಲಿ ನಿನ್ನೆ ಇಬ್ಬರು ಬಾಲಕರು ಹೊಳೆಪಾಲಾದ ಬೆನ್ನಲ್ಲೇ ನಡೆದಿರುವ ಈ ದುರಂತ ಪರಿಸರವನ್ನು ಶೋಕತಪ್ತವನ್ನಾಗಿಸಿದೆ.
ಮೃತಪಟ್ಟವರನ್ನು ಇಲ್ಲಿನ ನಿವಾಸಿ ಹಮೀದ್ ಎಂಬವರ ಪುತ್ರ ರಂಶಾನ್(4) ಹಾಗೂ ಅವರ ಸಹೋದರ ಶಬೀರ್ ಎಂಬವರ ಪುತ್ರ ನಫ್ವಾನ್(2) ಎಂದು ಗುರುತಿಸಲಾಗಿದೆ.
ಮಕ್ಕಳಿಬ್ಬರು ಇಂದು ಬೆಳಗ್ಗೆ ಮನೆಯಂಗಳದಲ್ಲಿ ಆಟವಾಡುತ್ತಿದ್ದರು. ಬಳಿಕ 9:30ರ ಸುಮಾರಿಗೆ ಅವರಿಬ್ಬರು ನಾಪತ್ತೆಯಾಗಿದ್ದು. ಈ ಹಿನ್ನೆಲೆಯಲ್ಲಿ ಮನೆಮಂದಿ ಸುತ್ತಮುತ್ತ ಹುಡುಕಾಡಿದರು. ಬಳಿಕ ಮನೆಯಂಗಳದ ಬಾವಿಯಲ್ಲಿ ನೋಡಿದಾಗ ಇಬ್ಬರು ಮಕ್ಕಳು ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ಅವರನ್ನು ಮೇಲೆತ್ತಿ ಬದಿಯಡ್ಕ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಅವರಿಬ್ಬರು ಮೃತಪಟ್ಟಿದ್ದರು.
ಹಮೀದ್‌ರ ಮನೆಯ ಬಾವಿಗೆ ಆವರಣ ಗೋಡೆ ಇದೆ. ಆದರೆ ಬಾವಿಯ ಆವರಣ ಗೋಡೆಗೆ ಹೊಂದಿಕೊಂಡು ಜಲ್ಲಿಕಲ್ಲುಗಳನ್ನು ರಾಶಿ ಹಾಕಲಾಗಿದೆ. ಇದರ ಮೇಲೆರಿದ ಮಕ್ಕಳು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಬಾವಿಕ್ಕರೆಯಲ್ಲಿ ಸೋಮವಾರ ಹೊಳೆಗೆ ಸ್ನಾನಕ್ಕಿಳಿದ ಅಬ್ದುಲ್ ಅಝೀಝ್(17) ಮತ್ತು ಮುಹಮ್ಮದ್ ಹಾಶಿಂ(13) ಎಂಬ ಇಬ್ಬರು ಬಾಲಕರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಅದರ ಬೆನ್ನಲ್ಲೇ ಇಂದು ನಡೆದಿರುವ ಪುಟಾಣಿ ಮಕ್ಕಳಿಬ್ಬರ ಅಕಾಲಿಕ ಮೃತ್ಯು ಬದಿಯಡ್ಕ ಪರಿಸರವನ್ನು ಶೋಕತಪ್ತವನ್ನಾಗಿಸಿದೆ.
ಘಟನೆಯ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News