×
Ad

ನಿಮ್ಮನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಕೆಲವು ಬ್ಯಾಂಕ್ ಗಳು ಏನು ಮಾಡುತ್ತಿವೆ ನೋಡಿ

Update: 2016-11-29 13:31 IST

ಹೊಸದಿಲ್ಲಿ, ನ.29: ಜನಸಾಮಾನ್ಯರುತಮ್ಮಲ್ಲಿರುವ ಅಮಾನ್ಯಗೊಂಡಿರುವ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿಯಿಡಲು ಯಾ ಹಣ ಹಿಂಪಡೆಯಲು ಬ್ಯಾಂಕು ಶಾಖೆಗಳ ಮುಂದೆ ಸರತಿ ನಿಂತು ಬಸವಳಿಯುತ್ತಿದ್ದರೆ ಕೆಲ ಬ್ಯಾಂಕು ಅಧಿಕಾರಿಗಳು ದೊಡ್ಡ ಕುಳಗಳಿಗೆ ತಮ್ಮ ಕಪ್ಪು ಹಣವನ್ನು ಬಿಳಿಯಾಗಿಸಲು ಸಹಾಯ ಮಾಡುತ್ತಿದ್ದಾರೆ.

ಒಂದು ಘಟನೆಯಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ತನಿಖೆಯಲ್ಲಿ ಕಂಡುಕೊಂಡಂತೆ ಖಾಸಗಿ ರಂಗದ ಆಕ್ಸಿಸ್ ಬ್ಯಾಂಕಿನ ಕಾಶ್ಮೀರಿ ಗೇಟ್ ಶಾಖೆಯಲ್ಲಿ ಸುಮಾರು 40 ಕೋಟಿ ರೂಪಾಯಿ ಅಮಾನ್ಯ ನೋಟುಗಳನ್ನುಅಕ್ರಮವಾಗಿ ಬಿಳಿಯಾಗಿಸಲಾಗಿದೆ.

ಈ ಕಾರ್ಯ ಸಾಧಿಸಲು ಬ್ಯಾಂಕು ಮೂರು ಶೆಲ್ ಕಂಪೆನಿಗಳನ್ನು ಬಳಸಿಕೊಂಡಿತ್ತು ಹಾಗೂ ಶಾಖೆಯ ಮ್ಯಾನೇಜರ್ ಹಾಗೂ ಆಪರೇಶನ್ಸ್ ಮ್ಯಾನೇಜರ್ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ. ಹೀಗೆ ಒಟ್ಟು ಠೇವಣಿಯಿಡಲಾದ ಮೊತ್ತದ ಮೇಲೆ ಅವರಿಗೆ ಶೇ.1ರಷ್ಟು ಕಮಿಷನ್ ದೊರೆತಿದೆ ಎಂದು ಹೇಳಲಾಗಿದೆ. ಆಸಕ್ತಿಯ ವಿಚಾರವೆಂದರೆ ಈ ಅವ್ಯವಹಾರವನ್ನು ಬ್ಯಾಂಕಿಂಗ್ ಸಮಯ ಮುಗಿದ ಬಳಿಕ ಸಂಜೆ 6:30ರ ನಂತರ ಮಾಡಲಾಗಿದೆ.

ಈ ಅವ್ಯವಹಾರ ನಡೆದದ್ದು ಹೇಗೆ ?

ಮೂರು ಶೆಲ್ ಕಂಪೆನಿಗಳಾದ ಸನ್ ರೈಸ್ ಟ್ರೇಡಿಂಗ್ ಕಂಪೆನಿ, ಹಿಮಾಲಯ ಇಂಟರ್ ನ್ಯಾಷನಲ್ ಹಾಗೂ ಆರ್ ಡಿ ಟ್ರೇಡರ್ಸ್ ಖಾತೆಗಳಲ್ಲಿ ಒಟ್ಟು ರೂ 39.26 ಕೋಟಿ ಹಣವನ್ನು ಠೇವಣಿಯಿರಿಸಲಾಗಿತ್ತು. ಒಮ್ಮೆ ಠೇವಣಿಯಿರಿಸಿದ ನಂತರ ಈ ಹಣವನ್ನು ಆರ್ ಟಿಜಿ ಎಸ್ಮೂಲಕ ನಿಜವಾದ ಫಲಾನುಭವಿಗೆ ವರ್ಗಾಯಿಸಲಾಗಿತ್ತು.

ವಾಸ್ತವವಾಗಿ ಇಷ್ಟೊಂದು ದೊಡ್ಡ ಮೊತ್ತವನ್ನು ವಿವಿಧ ಖಾತೆಗಳಿಂದ ಒಂದು ನಿರ್ದಿಷ್ಟ ವ್ಯಕ್ತಿಗೆ ವರ್ಗಾಯಿಸುವಾಗ ಬ್ಯಾಂಕುಗಳು ಸಹಜವಾಗಿ ಎಚ್ಚರಿಕೆಯಿಂದಿರಬೇಕು ಹಾಗೂ ಇವುಗಳನ್ನು ಸಂಶಯಾಸ್ಪದ ವರ್ಗಾವಣೆ ಎಂದು ತಿಳಿಯಬೇಕು. ಮೇಲಾಗಿ ಪ್ಯಾನ್ ಸಂಖ್ಯೆ ಮತ್ತು ಕೆವೈಸಿ ನಿಯಮಗಳನ್ನು ಪಾಲಿಸತಕ್ಕದ್ದು. ಆದರೆ ಈ ವಿಚಾರದಲ್ಲಿ ಆಕ್ಸಿಸ್ ಬ್ಯಾಂಕ್ ಯಾವುದೇ ನಿಯಮಗಳನ್ನು ಪಾಲಿಸಿಲ್ಲವೆನ್ನಲಾಗದೆ.

ಆದರೆ ಬ್ಯಾಂಕ್ ಮಾತ್ರ ತಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ ಹಾಗೂ ಕೆವೈಸಿ ನಿಯಮ ಸಹಿತ ಎಲ್ಲಾ ನಿಯಮಗಳನ್ನು ಪಾಲಿಸಿದ್ದೇನೆ ಎಂದು ಹೇಳುತ್ತಿದೆ.

ಆದಾಯ ತೆರಿಗೆ ಇಲಾಖೆ ಶುಕ್ರವಾರದಂದು ಬ್ಯಾಂಕಿನ ಶಾಖೆಯಲ್ಲಿ ತಪಾಸಣೆ ನಡೆಸಿದೆ ಹಾಗೂ ಆರೋಪಿಗಳಾಗಿರುವ ಇಬ್ಬರು ಹಿರಿಯ ಅಧಿಕಾರಿಗಳ ಮನೆಯಲ್ಲೂ ತಪಾಸಣೆ ನಡೆಸಿದೆ.

ನವೆಂಬರ್ 21 ರಂದು ದಿಲ್ಲಿ ಪೊಲೀಸರು ರೂ 3.5 ಕೋಟಿ ಹಣದೊಂದಿಗೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ನಂತರ ಈ ಅವ್ಯವಹಾರ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News