×
Ad

ಹಳೆ ನೋಟು ಠೇವಣಿಡಿ.30ರ ಗಡು ವಿಸ್ತರಣೆಯಿಲ್ಲ: ಕೇಂದ್ರ

Update: 2016-11-29 18:55 IST

ಹೊಸದಿಲ್ಲಿ, ನ.29: ಆರ್‌ಬಿಐ ಹಾಗೂ ಬ್ಯಾಂಕ್‌ಗಳಲ್ಲಿ ಸಾಕಷ್ಟು ನಗದು ಲಭ್ಯವಿದೆ. ರದ್ದಾಗಿರುವ ರೂ.500 ಹಾಗೂ 1000ದ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸುವ ಡಿ.30ರ ಅಂತಿಮ ಗಡುವನ್ನು ವಿಸ್ತರಿಸುವ ಬಗ್ಗೆ ಪರಿಶೀಲಿಸುತ್ತಿಲ್ಲವೆಂದು ಸರಕಾರವು ಮಂಗಳವಾರ ಹೇಳಿದೆ.
ಈ ಹೇಳಿಕೆಯನ್ನು ರಾಜ್ಯಸಭೆಯಲ್ಲಿ ನೀಡಲಾಗಿದೆ.

ಬ್ಯಾಂಕುಗಳು ಹಾಗೂ ಆರ್‌ಬಿಐಯಲ್ಲಿ ಸಾಕಷ್ಟು ನಗದು ಲಭ್ಯವಿದೆ. ರೂ.100ರ ನೋಟುಗಳ ಚಲಾವಣೆಯನ್ನು ಈಗಾಗಲೇ ಹೆಚ್ಚಿಸಲಾಗಿದೆಯೆಂದು ವಿತ್ತ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.

ಡಿ.30ರ ಗಡುವನ್ನು ವಿಸ್ತರಿಸಲಾಗುವುದೇ ಎಂಬ ಪ್ರಶ್ನೆಗೆ, 2016 ಡಿ.30ರ ಆಚೆಗೆ ಗಡುವನ್ನು ವಿಸ್ತರಿಸುವ ಪ್ರಸ್ತಾವ ಸದ್ಯ ಸರಕಾರದ ಪರಿಶೀಲನೆಯಲ್ಲಿಲ್ಲ. ಗ್ರಾಮೀಣ ಪ್ರದೇಶಗಳ ಅಗತ್ಯ ಪೂರೈಸಲು, ರೂ.100 ಹಾಗೂ ಕಡಿಮೆ ಮುಖಬೆಲೆಯ ನೋಟುಗಳನ್ನು ಪೂರೈಸುವಂತೆ ಬ್ಯಾಂಕ್‌ಗಳಿಗೆ ಸಲಹೆ ನೀಡಲಾಗಿದೆಯೆಂದು ಅವರು ಉತ್ತರಿಸಿದರು.

 ಇನ್ನೊಂದು ಪ್ರಶ್ನೆಗುತ್ತರಿಸಿದ ಸಹಾಯಕ ವಿತ್ತ ಸಚಿವ ಸಂತೋಷ್ ಕುಮಾರ್ ಗಂಗ್ವರ್, ತಮ್ಮ ಶಾಖೆಗಳು ಹಾಗೂ ಎಟಿಎಂಗಳಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿಸುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಕಾಲಕಾಲಕ್ಕೆ ಸಲಹೆ ನೀಡುತ್ತಿದೆ. ಎಟಿಎಂ ನಿವೇಶನಕ್ಕೆ ಸಿಸಿಟಿವಿ ಅಳವಡಿಕೆ ಹಾಗೂ ಅಲ್ಲಿ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿಗೆ ಸಾಕಷ್ಟು ತರಬೇತಿಯನ್ನು ಖಚಿತಪಡಿಸುವುದು ಅದರಲ್ಲಿ ಸೇರಿದೆಯೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News