×
Ad

ಆದಾಯದ ಮಿತಿ ಇನ್ನೂ ಹೀಗೇಕೆ?

Update: 2016-11-30 00:21 IST

 ಮಾನ್ಯರೆ,
ಕರ್ನಾಟಕ ರಾಜ್ಯದಲ್ಲಿ ಬಡವರಿಗಾಗಿ ಅನೇಕ ‘ಭಾಗ್ಯ’ ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ. ಈ ಎಲ್ಲ ಯೋಜನೆಗಳಿಗೆ ಒಂದೇ ತೆರನಾದ ಆದಾಯ ಮಿತಿ ಇರುವುದಿಲ್ಲ. ಕೆಲವೊಂದು ಯೋಜನೆಗಳಿಗೆ ರೂ. 12,000, ರೂ. 20,000, ರೂ. 40,000, ಹಾಗೂ ರೂ. 1 ಲಕ್ಷ ಆದಾಯದ ಮಿತಿ ಇರುತ್ತದೆ.
ಸರಕಾರ ವಿಧಿಸಿದ ಆದಾಯ ಮಿತಿಯಂತೆ ಒಬ್ಬ ಬಡವನಿಗೆ ವಾರ್ಷಿಕ ರೂ. 12,000 ಆದಾಯವಿರುವುದಾದರೆ, ತಿಂಗಳಿಗೆ ರೂ. 1,000 ಆಗುತ್ತದೆ. ದಿನಕ್ಕೆ 33.3 ರೂ. ಆಗುತ್ತದೆ. ಒಂದು ಚಿಕ್ಕ ಕುಟುಂಬಕ್ಕೆ ಗಂಡ-ಹೆಂಡತಿ, ಇಬ್ಬರು ಮಕ್ಕಳಿದ್ದಾರೆಂದು ಭಾವಿಸಿದರೂ ಆ ಕುಟುಂಬದ ದೈನಿಕ ಖರ್ಚನ್ನು ಅವಲೋಕಿಸಿದರೆ ಕನಿಷ್ಟ ರೂ. 250ರಷ್ಟಾಗುತ್ತದೆ. ಒಬ್ಬ ಕೂಲಿ ಕೆಲಸ ಮಾಡುವುದಾದರೂ ಈಗ ಕನಿಷ್ಠ ರೂ. 250 ಸಂಬಳ ಸಿಗುತ್ತದೆ. ಹೆಂಡತಿ ಬೀಡಿ ಕೆಲಸದಂತಹ ಸಣ್ಣಪುಟ್ಟ ಕೆಲಸ ಮಾಡಿದರೂ ಕನಿಷ್ಠ 50-60 ಸಿಗುತ್ತದೆ. ಇಬ್ಬರ ಒಟ್ಟು ಕೂಲಿ ದಿನಕ್ಕೆ 300 ಸಿಗುತ್ತದೆ. ಹೀಗೆ ದಂಪತಿ (ಎಲ್ಲ ದಿನಗಳಲ್ಲಿ ಆದಾಯ ಇಲ್ಲದಿದ್ದರೂ) ತಿಂಗಳೊಂದಕ್ಕೆ ಕನಿಷ್ಠ 5,000 ರೂ. ದುಡಿದರೂ ವಾರ್ಷಿಕ ರೂ. 60,000 ಆಗುತ್ತದೆ.
ಆದ್ದರಿಂದ ವಾರ್ಷಿಕ ಆದಾಯ 12,000 ರೂ. ಮಿತಿ ಹೇರಿರುವ ಬಡವರಿಗೆಂದು ಘೋಷಿಸಲಾದ ಈ ಯೋಜನೆಗಳು ಬಡವರಿಗೆ ಕೈಗೆಟುಕಿಯಾವೆ? ಒಂದೊಮ್ಮೆ ಬಡವರು ಈ ಯೋಜನೆಗಳನ್ನು ದೊರಕಿಸಿಕೊಳ್ಳಲು ಸುಳ್ಳು ಆದಾಯ ಪತ್ರ ತಯಾರಿಸಲು ಲಂಚ ಕೊಡಬೇಕಾದ ಸಂದರ್ಭವನ್ನು ಸೃಷ್ಟಿಸಿ ಸರಕಾರವೇ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿದಂತಾಗಿಲ್ಲವೇ?
ಸರಕಾರಕ್ಕೆ ಬಡವರ ಬಗ್ಗೆ ಕಾಳಜಿಯಿದ್ದರೆ, ಯೋಜನೆಗಳು ಪಾರದರ್ಶಕವಾಗಿ ಅನುಷ್ಠಾನಗೊಳ್ಳಬೇಕಾದರೆ ಆದಾಯ ಮಿತಿಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ.
 

Writer - -ಎ. ಎಚ್. ಟಿ., ಮಂಗಳೂರು

contributor

Editor - -ಎ. ಎಚ್. ಟಿ., ಮಂಗಳೂರು

contributor

Similar News