×
Ad

ಬ್ರಿಟನ್‌ನಲ್ಲಿ ಎಮಿರೇಟ್ಸ್ ವಿಮಾನದ ಮೇಲೆ ‘ಲೇಸರ್ ದಾಳಿ’

Update: 2016-11-30 20:03 IST

ಲಂಡನ್, ನ. 30: ಎಮಿರೇಟ್ಸ್ ವಿಮಾನವೊಂದು ನವೆಂಬರ್ 16ರಂದು ಬ್ರಿಟನ್‌ನ ಹೆರ್ಟ್‌ಫೋರ್ಡ್‌ಶಯರ್‌ನ ಆಕಾಶದಲ್ಲಿ ಹಾರುತ್ತಿದ್ದಾಗ ಅದರ ಮೇಲೆ ‘ಅತ್ಯಂತ ಗಂಭೀರ’ ಸ್ವರೂಪದ ಲೇಸರ್ ಪಾಯಿಂಟ್ ದಾಳಿಯಾಗಿದೆ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.

ವಿಮಾನದ ಮೇಲೆ ‘ಕನಿಷ್ಠ ಎರಡು ಸೆಕೆಂಡ್‌ಗಳ ಕಾಲ’ ಹಸಿರು ಲೇಸರ್ ಧಾರೆಯನ್ನು ಹರಿಸಲಾಗಿದೆ ಎಂದು ಹೆರ್ಟ್‌ಫೋರ್ಡ್‌ಶಯರ್ ಪೊಲೀಸ್ ವಕ್ತಾರರೊಬ್ಬರು ‘ಡೇಲಿ ಮೇಲ್’ಗೆ ಹೇಳಿದ್ದಾರೆ. ಆದಾಗ್ಯೂ, ಈ ಘಟನೆಯ ಬಳಿಕ ವಿಮಾನ ತನ್ನ ಪಥವನ್ನು ಬದಲಿಸಿಲ್ಲ.

ವ್ಯಾಟ್‌ಫೋರ್ಡ್ ಸಮೀಪದ ಬುಶಿಯಲ್ಲಿರುವ ‘ದ ಅವೆನ್ಯೂ’ ಪರಿಸರದಲ್ಲಿ ಸಂಜೆ 7:55ಕ್ಕೆ ಘಟನೆ ನಡೆದಿದೆ.

ಇದಕ್ಕೂ ಮೊದಲು ಆಗಸ್ಟ್‌ನಲ್ಲಿ ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಿದ್ಧತೆ ನಡೆಸುತ್ತಿದ್ದ ಬ್ರಿಟಿಶ್ ಏರ್‌ವೇಸ್ ವಿಮಾನವೊಂದರ ಮೇಲೆಯೂ ಲೇಸರ್ ಬೆಳಕಿನ ದಾಳಿ ನಡೆದಿತ್ತು.

‘‘ಇದು ಅತ್ಯಂತ ಗಂಭೀರ ಅಪರಾಧ ಹಾಗೂ ಇದರಿಂದ ಅತ್ಯಂತ ಗಂಭೀರ ಪರಿಣಾಮಗಳಾಗುವ ಸಾಧ್ಯತೆಗಳಿದ್ದವು. ಈ ಬಗ್ಗೆ ಮಾಹಿತಿ ಇರುವವರು ನಮಗೆ ಮಾಹಿತಿ ನೀಡಿ ತನಿಖೆಯಲ್ಲಿ ಸಹಕರಿಸಬೇಕೆಂದು ನಾವು ಕೋರುತ್ತೇವೆ’’ ಎಂದು ಹೆರ್ಟ್‌ಫೋರ್ಡ್‌ಶಯರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪೀಟರ್ ಎಡ್ವರ್ಡ್ಸ್ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಕಳೆದ ವರ್ಷ ವಿಮಾನಗಳ ಮೇಲೆ 1,439 ಲೇಸರ್ ದಾಳಿಗಳಾಗಿವೆ ಎಂದು ನಾಗರಿಕ ವಾಯುಯಾನ ಪ್ರಾಧಿಕಾರದ ಅಂಕಿಅಂಶಗಳು ಹೇಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News