ಅಮಾಸೆಬೈಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ; ಜಿಪಂ ಅನುಮೋದನೆ

Update: 2016-11-30 17:39 GMT

ಉಡುಪಿ, ನ.30: ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶವಾದ ಅಮಾಸೆಬೈಲಿನಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯಲ್ಲಿ ಹಾಗೂ ಜಿಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ರಾಜ್ಯಮಟ್ಟಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಹೇಳಿದ್ದಾರೆ.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ಅಮಾಸೆಬೈಲಿನಲ್ಲಿ ಇಲಾಖೆಯ ಮೊಬೈಲ್ ಯುನಿಟ್ ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲಿನ ಜನರ ಆರೋಗ್ಯವನ್ನು ಗಮನದಲ್ಲಿರಿಸಿ ಈ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು. ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು ಅಮಾಸೆಬೈಲಿನಲ್ಲಿ ಶಾಶ್ವತ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿದ್ದರು.

ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜಕ್ಕೆ ಶೇ.50 ಸಬ್ಸಿಡಿ ನೀಡಲು ಕೋರಿ ಪ್ರಸ್ತಾವನೆ ಸಲ್ಲಿಸಲು ಸದಸ್ಯ ರಾಘವೇಂದ್ರ ಕಾಂಚನ್ ಸಭೆಯನ್ನು ಒತ್ತಾಯಿಸಿದರು. ಉದ್ದು ಬಿತ್ತನೆ ಬೀಜ ಜಿಲ್ಲೆಯಲ್ಲಿ ಲ್ಯವಿದ್ದು ಕೃಷಿಕರು ಸದ್ಬಳಕೆ ಮಾಡಿಕೊಳ್ಳಬಹುದು. ಕೃಷಿ ಸುಣ್ಣಕ್ಕೆ ಇಲಾಖೆಯಲ್ಲಿ ಕೊರತೆಯಿಲ್ಲ, ಯಂತ್ರೋಪಕರಣಗಳು ಸಬ್ಸಿಡಿ ದರದಲ್ಲಿ ಲ್ಯವಿದೆ ಹಾಗೂ ಬಾಡಿಗೆ ಕೇಂದ್ರ ಗಳಲ್ಲಿ ಕೃಷಿ ಯಂತ್ರಗಳು ಲ್ಯವಿದ್ದು ರೈತರು ಇಲಾಖೆಯ ಯೋಜನೆಗಳನ್ನು ಪಡೆದುಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ವಿವರಿಸಿದರು.

ನಮ್ಮ ಗ್ರಾಮ ನಮ್ಮ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ನಿಗದಿತ ಗುರಿ ಸಾಧಿಸಿದ್ದು, ಹೊಸ 6 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ಸಬೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸಮಗ್ರ ಸ್ವಚ್ಛತೆಗೆ ಸಂಬಂಧಿಸಿದಂತೆ ಘನ ತ್ಯಾಜ್ಯ ವಿಲೆ ಘಟಕ ಗಳನ್ನು ಸ್ಥಾಪಿಸಲು ಗ್ರಾಪಂಗಳು ಮುಂದಾದರೂ ಸಾರ್ವಜನಿಕರಿಂದ ಸಹಕಾರ ಸಿಗುತ್ತಿಲ್ಲ. ಹಿರಿಯಡ್ಕ, ಕಲ್ಯಾಣಪುರ, ಉಪ್ಪೂರುಗಳಿಗೆ ಕನಿಷ್ಠ ಒಂದು ಘಟಕ ಸ್ಥಾಪಿಸಲು ಸದಸ್ಯರು ಮತ್ತು ಸಾರ್ವಜನಿಕರು ಸಹಕರಿಸಬೇಕು. ಇದೇ ಮಾದರಿ ಯನ್ನು ಉಳಿದವರು ಅನುಸರಿಸಬಹುದು ಎಂದು ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಎಲ್ಲ ಗ್ರಾಪಂಗಳಲ್ಲೂ ಕಸ ವಿಲೇವಾರಿ ಆಗಬೇಕಿದೆ. ಸಮಗ್ರ ಸ್ವಚ್ಛತೆಗೆ ಗ್ರಾಪಂನಲ್ಲಿ ವ್ಯವಸ್ಥೆಗಳಾಗಬೇಕು. ಪಡಿತರ ವಿತರಣೆ ಸಂದರ್ಭವೇ ಸೀಮೆಎಣ್ಣೆ ನೀಡುವ ಬಗ್ಗೆ, ಗ್ರಾಮಸಭೆಗಳನ್ನು ಸಮರ್ಪಕವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದರೂ ಇನ್ನಷ್ಟು ಪರಿಣಾಮಕಾರಿ ಯಾಗಿ ನಡೆಸುವ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿ ಎಂದು ಸದಸ್ಯರು ಜಿಪಂ ಅಧ್ಯಕ್ಷರ ಗಮನಸೆಳೆದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಸೇರಿದಂತೆ ಹಲವು ಸದಸ್ಯರು ಹೆಬ್ರಿ ನೆಲ್ಲಿಕಟ್ಟೆಶಾಲೆ, ನಾಡ್ಪಾಲು, ಕುಂದಾಪುರದ ಗ್ರಾಮಾಂತರ ಪ್ರದೇಶಗಳು ಹಾಗೂ ಪೆರ್ಡೂರು ಕುಕ್ಕಿಕಟ್ಟೆ, ಕೊಳಲಗಿರಿಗಳಲ್ಲಿ, ಶಿರಿಯಾರ ಬೇಳೂರು, ಕೋಟ ಪ್ರದೇಶಗಳಲ್ಲಿ ಬಸ್ಸುಗಳ ಅವಶ್ಯಕತೆ ಇದ್ದು, ಕೆಸ್ಸಾರ್ಟಿಸಿ ಯಿಂದ ಬಸ್‌ಗಳನ್ನು ಓಡಿಸಲಿ ಎಂದು ಸದಸ್ಯರು ಬೇಡಿಕೆಯಿಟ್ಟರು. ಆರ್‌ಟಿಒ ಅವರು ಇದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಿ ಎಂದು ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.

ಮರಳುಗಾರಿಕೆಯಲ್ಲಿ ಅಕ್ರಮ ಮುಂದುವರಿದಿರುವ ಬಗ್ಗೆ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಬಾಧ್ಯಕ್ಷರ ಗಮನಸೆಳೆದರಲ್ಲದೆ, ಪಿಡಬ್ಲುಡಿ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು. ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಅಧಿಕಾರಿಗಳು ಜಿಪಂ ಸಾಮಾನ್ಯ ಸಭೆ ಯನ್ನು ಲಘುವಾಗಿ ಪರಿಗಣಿಸಬಾರದು. ಸದಸ್ಯರ ಪ್ರಶ್ನೆಗಳಿಗೆ ಹಾರಿಕೆಯ ಹಾಗೂ ಮಾದರಿ ಉತ್ತರ ನೀಡುವುದನ್ನು ಆಕ್ಷೇಪಿಸಿದರು.

ಅಧಿಕಾರಿಗಳು ತಮ್ಮ ಅನುಮತಿ ಇಲ್ಲದೆ ಅಥವಾ ಮಾಹಿತಿ ನೀಡದರೆ ಸಬೆಗೆ ಗೈರುಹಾಜರಾಗುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆಯಲು ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಸೂಚಿಸಿದರು. ಸಭೆಸಮಾರಂಭಗಳನ್ನು ಆಯೋಜಿಸುವಾಗ ಶಿಷ್ಟಾಚಾರ ಅನುಸರಿಸಿ ಎಂಬ ಎಚ್ಚರಿಕೆಯನ್ನು ನೀಡಿದರು.

ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಇದ್ದರು. ಸದಸ್ಯರಾದ ದಿವ್ಯಶ್ರೀ ಗಿರೀಶ್ ಅಮೀನ್, ಗೌರಿ ದೇವಾಡಿಗ, ಜನಾರ್ದನ ತೋನ್ಸೆ, ರೇಷ್ಮಾ ಉದಯ್ ಶೆಟ್ಟಿ, ಗೀತಾಂಜಲಿ ಎಂ ಸುವರ್ಣ, ಸುಧಾಕರ ಶೆಟ್ಟಿ ಮೈರ್ಮಾಡಿ, ಚಂದ್ರಿಕಾ ರಂಜನ್ ಕೇಲ್ಕರ್, ಶೋಭಾ ಜಿ ಪುತ್ರನ್, ಬಂಟವಾಡಿ ಸುರೇಶ, ಪ್ರತಾಪ್ ಹೆಗ್ಡೆ ಮಾರಾಳಿ ಚರ್ಚೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News