ಇಂಗ್ಲೆಂಡ್ ತಂಡಕ್ಕೆ ಜೆನ್ನಿಂಗ್ಸ್ , ಡಾಸನ್ ಸೇರ್ಪಡೆ
ಹೊಸದಿಲ್ಲಿ, ನ.30: ಭಾರತ ವಿರುದ್ಧ ಟೆಸ್ಟ್ ಸರಣಿಯ ಉಳಿದೆರಡು ಪಂದ್ಯಗಳಿಗೆ ಆರಂಭಿಕ ಆಟಗಾರ ಕೀಟನ್ ಜೆನ್ನಿಂಗ್ಸ್ ಹಾಗೂ ಸ್ಪಿನ್ನರ್ ಲಿಯಾಮ್ ಡಾಸನ್ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಇಬ್ಬರು ಆಟಗಾರರು ಗಾಯಗೊಂಡಿರುವ ಹಸೀಬ್ ಹಮೀದ್ ಹಾಗೂ ಝಾಫರ್ ಅನ್ಸಾರಿ ಬದಲಿಗೆ ಆಯ್ಕೆಯಾಗಿದ್ದಾರೆ. 19ರ ಹರೆಯದ ಹಮೀದ್ ಬೆರಳಿಗೆ ಆಗಿರುವ ಗಾಯದಿಂದಾಗಿ ಸರಣಿಯಿಂದಲೇ ಹೊರ ನಡೆದಿದ್ದಾರೆ. ಝಾಫರ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ.
ಜೆನ್ನಿಂಗ್ಸ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಡುಹ್ರಾಮ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 64.5ರ ಸರಾಸರಿಯಲ್ಲಿ ಏಳು ಶತಕ ಹಾಗೂ ಒಂದು ದ್ವಿಶತಕ ಸಹಿತ 1,548 ರನ್ ಗಳಿಸಿದ್ದರು. ಪ್ರಸ್ತುತ ಇಂಗ್ಲೆಂಡ್ ಲಯನ್ಸ್ ತಂಡದಲ್ಲಿದ್ದಾರೆ. ವೀಸಾ ಲಭಿಸಿದ ತಕ್ಷಣ ಡಿ.5 ರಂದು ಭಾರತಕ್ಕೆ ಆಗಮಿಸಲಿದ್ದಾರೆ.
ಮೊಹಾಲಿಯಲ್ಲಿ ನಡೆದ ಮೂರನೆ ಟೆಸ್ಟ್‌ನ ವೇಳೆ ಕಿರು ಬೆರಳಿನ ಮುರಿತಕ್ಕೆ ಒಳಗಾಗಿದ್ದ ಹಮೀದ್ ಸರ್ಜರಿಗಾಗಿ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಹಮೀದ್ ಮೊಹಾಲಿಯಲ್ಲಿ ನಡೆದ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ ಕೈಬೆರಳಿನ ನೋವಿನ ನಡುವೆಯೂ ಅಜೇಯ 59 ರನ್ ಗಳಿಸಿದ್ದರು. ಹಮೀದ್ ಭಾರತ ವಿರುದ್ಧ 3 ಟೆಸ್ಟ್‌ನಲ್ಲಿ 43.80ರ ಸರಾಸರಿಯಲ್ಲಿ ಒಟ್ಟು 219 ರನ್ ಗಳಿಸಿದ್ದರು.
ಹ್ಯಾಂಪ್‌ಶೈರ್‌ನ ಡಾಸನ್ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯ ಆಡಿದ್ದರು. ಸೆಪ್ಟಂಬರ್‌ನಲ್ಲಿ ಪಾಕಿಸ್ತಾನದ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು.
ಡಾಸನ್ ಅವರು ಸರ್ರೆ ತಂಡದ ಆಲ್‌ರೌಂಡರ್ ಅನ್ಸಾರಿ ಬದಲಿಗೆ ಆಡಲಿದ್ದಾರೆ. ಅನ್ಸಾರಿ ವಿಶಾಖಪಟ್ಟಣದಲ್ಲಿ ನಡೆದ ದ್ವಿತೀಯ ಟೆಸ್ಟ್‌ನ ವೇಳೆ ಬೆನ್ನುನೋವಿಗೆ ತುತ್ತಾಗಿದ್ದರು.