ಎಐಟಿಎಗೆ ಪ್ರವೀಣಾ ಮಹಾಜನ್ ಅಧ್ಯಕ್ಷೆ
ಹೊಸದಿಲ್ಲಿ, ಡಿ.1: ಹಿರಿಯ ಮಹಿಳಾ ಅಧಿಕಾರಿ ಪ್ರವೀಣಾ ಮಹಾಜನ್ ಅಖಿಲ ಭಾರತ ಟೆನಿಸ್ ಸಂಸ್ಥೆಯ(ಎಐಟಿಎ) ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಮಹಾಜನ್ ಎಐಟಿಎ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ ಆಗಿದ್ದಾರೆ.
ಕ್ರೀಡಾ ಸಚಿವಾಲಯದಿಂದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲ್ಪಟ್ಟ ಅನಿಲ್ ಖನ್ನಾ ಅವರ ಸ್ಥಾನಕ್ಕೆ ಮಹಾಜನ್ ಆಯ್ಕೆಯಾಗಿದ್ದಾರೆ.
ಮಾಜಿ ಐಆರ್‌ಎಸ್ ಅಧಿಕಾರಿ ಮಹಾಜನ್‌ರನ್ನು ಎಐಟಿಎ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣೆ ನಡೆಯುವ ತನಕ ಮಹಾಜನ್ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ.
ಖನ್ನಾ 2012ರಲ್ಲಿ ಕ್ರೀಡಾ ಸಂಹಿತೆಗೆ ವಿರುದ್ಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವಾದಿಸುತ್ತಿರುವ ಕ್ರೀಡಾ ಸಚಿವಾಲಯ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿತ್ತು.
ಗುರುವಾರ ಇಲ್ಲಿ ಸಭೆ ಸೇರಿರುವ ಎಐಟಿಎ ಕಾರ್ಯಕಾರಿಣಿ ಸಮಿತಿಯು 10 ಉಪಾಧ್ಯಕ್ಷರ ಪೈಕಿ ಒಬ್ಬರಾಗಿರುವ ಮಹಾಜನ್‌ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಎಐಟಿಎ 2017ರ ಮಾರ್ಚ್ 31 ರಂದು ವಿಶೇಷ ಸಾಮಾನ್ಯ ಸಭೆ ನಡೆಸಲಿದ್ದು, ಆ ಸಭೆಯಲ್ಲಿ ಸದಸ್ಯರು 2020ರ ತನಕ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.