ರಣಜಿ ಟ್ರೋಫಿ: ಕರ್ನಾಟಕಕ್ಕೆ ಶಾಕ್ ನೀಡಲು ಸೌರಾಷ್ಟ್ರ ಚಿತ್ತ
ಪಟಿಯಾಲ, ಡಿ.1: ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಸೋಲಿನ ಸುಳಿಯಲ್ಲಿದೆ. ಸೋಲು ತಪ್ಪಿಸಲು ಅಬ್ಬಾಸ್ ಹಾಗೂ ಗೋಪಾಲ್ ಹೋರಾಟ ನಡೆಸುತ್ತಿದ್ದಾರೆ.
ಮೂರನೆ ದಿನವಾದ ಗುರುವಾರ ಆಟ ಕೊನೆಗೊಂಡಾಗ ಕರ್ನಾಟಕ ಎರಡನೆ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿದ್ದು, ಕೇವಲ 9 ರನ್ ಮುನ್ನಡೆಯಲ್ಲಿದೆ. ಬಿ ಗುಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸೌರಾಷ್ಟ್ರ ತಂಡ ಅಗ್ರ ಸ್ಥಾನದಲ್ಲಿರುವ ಕರ್ನಾಟಕ ತಂಡಕ್ಕೆ ಈ ವರ್ಷದ ಟೂರ್ನಿಯಲ್ಲಿ ಮೊದಲ ಬಾರಿ ಸೋಲಿನ ಕಹಿ ಉಣಿಸಿ ಶಾಕ್ ನೀಡುವತ್ತ ಚಿತ್ತವಿರಿಸಿದೆ.
ಆಫ್-ಸ್ಪಿನ್ನರ್ ಕಮಲೇಶ್ ಮಕ್ವಾನ ಹಾಗೂ ಎಡಗೈ ಸ್ಪಿನ್ನರ್ ಜೈ ಚೌಹಾಣ್ ಕರ್ನಾಟಕದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾದರು.
ಆರಂಭಿಕ ದಾಂಡಿಗ ಕೆ. ಅಬ್ಬಾಸ್(ಅಜೇಯ 62 ರನ್, 173 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಶ್ರೇಯಸ್ ಗೋಪಾಲ್(ಅಜೇಯ 15) ಕರ್ನಾಟಕದ ಆಶಾಕಿರಣವಾಗಿದ್ದಾರೆ. ಈ ಇಬ್ಬರು ಕರ್ನಾಟಕದ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಳ್ಳಲು ನೆರವಾಗುವರೇ ಎಂದು ಶುಕ್ರವಾರ ಗೊತ್ತಾಗಲಿದೆ.
ಮನೀಷ್ ಪಾಂಡೆ ಸತತ ಎರಡನೆ ಅರ್ಧಶತಕ(58 ರನ್, 108 ಎಸೆತ, 5 ಬೌಂಡರಿ, 1 ಸಿಕ್ಸರ್) ಬಾರಿಸಿ ತಂಡವನ್ನು ಆಧರಿಸಿದರು. ಪಾಂಡೆ ಮೊದಲ ಇನಿಂಗ್ಸ್‌ನಲ್ಲಿ 75 ರನ್ ಗಳಿಸಿದ್ದರು. ಸಮರ್ಥ್(11)ಹಾಗೂ ಅಬ್ಬಾಸ್(62) ಕರ್ನಾಟಕದ ಇನಿಂಗ್ಸ್ ಆರಂಭಿಸಿದರು. ಆದರೆ, ಈ ಇಬ್ಬರಿಗೆ ತಂಡಕ್ಕೆ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಸಮರ್ಥ್ ಕೇವಲ 11 ರನ್ ಗಳಿಸಿ ಚೌಹಾಣ್‌ಗೆ ವಿಕೆಟ್ ಒಪ್ಪಿಸಿದರು.
3ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಾಬಿನ್ ಉತ್ತಪ್ಪ ಕೇವಲ 8 ರನ್ ಗಳಿಸಿ ಔಟಾದರು. ಆಗ 3ನೆ ವಿಕೆಟ್‌ಗೆ 110 ರನ್ ಜೊತೆಯಾಟ ನಡೆಸಿದ ಅಬ್ಬಾಸ್ ಹಾಗೂ ಪಾಂಡೆ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು.
ಪಾಂಡೆ ನಿರ್ಗಮನದ ಬೆನ್ನಿಗೇ ಕರ್ನಾಟಕ ಮತ್ತೆ ಕುಸಿತ ಕಂಡಿತು. ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ(6) ಹಾಗೂ ಸಿಎಂ ಗೌತಮ್(0) ಬೆನ್ನುಬೆನ್ನಿಗೆ ಪೆವಿಲಿಯನ್‌ಗೆ ವಾಪಸಾದರು. 6ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 21 ರನ್ ಸೇರಿಸಿದ ಅಬ್ಬಾಸ್ ಹಾಗೂ ಗೋಪಾಲ್ ಕೊನೆಯ ದಿನಕ್ಕೆ ಆಟವನ್ನು ಕಾಯ್ದಿಸಿದರು.
ಬಿ ಗುಂಪಿನ ಅಗ್ರ ಸ್ಥಾನಿ ಕರ್ನಾಟಕದ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸದಲ್ಲಿರುವ ಸೌರಾಷ್ಟ್ರದ ಪರ ಮಕ್ವಾನ(3-43) ಹಾಗೂ ಚೌಹಾಣ್(2-54) ಐದು ವಿಕೆಟ್ ಹಂಚಿಕೊಂಡರು.
ಇದಕ್ಕೆ ಮೊದಲು 6 ವಿಕೆಟ್ ನಷ್ಟಕ್ಕೆ 296 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಸೌರಾಷ್ಟ್ರ 359 ರನ್‌ಗೆ ಆಲೌಟಾಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 159 ರನ್ ಮುನ್ನಡೆ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 200
ಕರ್ನಾಟಕ ದ್ವಿತೀಯ ಇನಿಂಗ್ಸ್:168/5
(ಕೆ. ಅಬ್ಬಾಸ್ ಅಜೇಯ 62, ಮನೀಷ್ ಪಾಂಡೆ 58, ಗೋಪಾಲ್ ಅಜೇಯ 15, ಮಕ್ವಾನ 3-46, ಚೌಹಾಣ್ 2-54)
ಸೌರಾಷ್ಟ್ರ ಪ್ರಥಮ ಇನಿಂಗ್ಸ್: 359
ಪಂಜಾಬ್ ವಿರುದ್ಧ ಗುಜರಾತ್ ಮೇಲುಗೈ
ಬೆಳಗಾವಿ,ಡಿ.1: ಇಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಗುಜರಾತ್ ತಂಡ ಪಂಜಾಬ್‌ನ ವಿರುದ್ಧ ಮೇಲುಗೈ ಸಾಧಿಸಿದ್ದು, ಪೂರ್ಣಾಂಕ ಗಳಿಸುವತ್ತ ಚಿತ್ತವಿರಿಸಿದೆ.
ಪ್ರಿಯಾಂಕ್ ಪಾಂಚಾಲ್ ಬಾರಿಸಿದ ತ್ರಿಶತಕದ ನೆರವಿನಿಂದ ಗುಜರಾತ್ ತಂಡ ಮೊದಲ ಇನಿಂಗ್ಸ್‌ನ್ನು 6 ವಿಕೆಟ್ ನಷ್ಟಕ್ಕೆ 624 ರನ್‌ಗೆ ಡಿಕ್ಲೇರ್ ಮಾಡಿತು.
ಮೊದಲ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ ರಶ್ ಕಲರಿಯ(4-41) ದಾಳಿಗೆ ಸಿಲುಕಿ 85.2 ಓವರ್‌ಗಳಲ್ಲಿ 247 ರನ್‌ಗೆ ಆಲೌಟಾಯಿತು. ಫಾಲೋ-ಆನ್‌ಗೆ ಸಿಲುಕಿದ ಪಂಜಾಬ್ ಎರಡನೆ ಇನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಪಂಜಾಬ್‌ನ ಪರ ಮನನ್ ವೋರಾ(68) ಸರ್ವಾಧಿಕ ಸ್ಕೋರ್ ಬಾರಿಸಿದರು. ಗಿತ್ನೇಶ್ ಖೇರ(ಅಜೇಯ 35) ಹಾಗು ಮನ್‌ಪ್ರೀತ್ ಗೋನಿ(26) ಪಂಜಾಬ್ ತಂಡ ಕೊನೆಯ 4 ವಿಕೆಟ್‌ಗಳ ನೆರವಿನಿಂದ 113 ರನ್ ಗಳಿಸಲು ನೆರವಾದರು.
ಗುಜರಾತ್‌ನ ಬೌಲಿಂಗ್‌ನಲ್ಲಿ ಕಲರಿಯ ಯಶಸ್ವಿ ಬೌಲರ್ ಎನಿಸಿಕೊಂಡರೆ, ಹಾರ್ದಿಕ್ ಪಟೇಲ್ ಹಾಗೂ ಆರ್‌ಪಿ ಸಿಂಗ್ ತಲಾ 2 ವಿಕೆಟ್ ಕಬಳಿಸಿದರು.