×
Ad

ಸೈನಾ ಕ್ವಾರ್ಟರ್ ಫೈನಲ್‌ಗೆ, ಕಶ್ಯಪ್‌ಗೆ ಸೋಲು

Update: 2016-12-01 23:13 IST

 ಹೊಸದಿಲ್ಲಿ, ಡಿ.1: ಮಕಾವು ಓಪನ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಅಗ್ರ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಗುರುವಾರ ಮಕಾವುನಲ್ಲಿ ಒಂದು ಗಂಟೆ ಹಾಗೂ 2 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ಅವರು ಇಂಡೋನೇಷ್ಯಾದ ದಿನಾರ್ ಅಯುಸ್ಟೈನ್‌ರನ್ನು 17-21, 21-18, 21-12 ಗೇಮ್‌ಗಳ ಅಂತರದಿಂದ ಮಣಿಸಿದರು.

ಮೊದಲ ಗೇಮ್‌ನ್ನು 17-21ರಿಂದ ಸೋತ ಸೈನಾ ಆ ಬಳಿಕ ನಡೆದ ಎರಡು ಗೇಮ್‌ಗಳನ್ನು 21-18, 21-12 ಅಂತರದಿಂದ ಗೆದ್ದುಕೊಂಡರು. ಸೈನಾ ಮುಂದಿನ ಸುತ್ತಿನಲ್ಲಿ ಚೀನಾದ ಝಾಂಗ್ ಯಿಮಾನ್‌ರನ್ನು ಎದುರಿಸಲಿದ್ದಾರೆ.

 ಆಗಸ್ಟ್‌ನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೈನಾ ಕೋಚ್ ವಿಮಲ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಚೇತರಿಸಿಕೊಂಡಿದ್ದಾರೆ.

ಚೀನಾ ಓಪನ್‌ನಲ್ಲಿ ಆಡುವ ಮೂಲಕ ಬ್ಯಾಡ್ಮಿಂಟನ್‌ಗೆ ವಾಪಸಾಗಿದ್ದಾರೆ. ಚೀನಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತಿದ್ದ ಸೈನಾ ಹಾಂಕಾಂಗ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಕೂದಲೆಳೆ ಅಂತರದಿಂದ ಸೋತಿದ್ದರು.

ಕಶ್ಯಪ್, ಮನು ಅತ್ರಿ-ಸುಮೀತ್‌ಗೆ ಸೋಲು: ಇದೇ ವೇಳೆ ಸಿಂಗಲ್ಸ್ ಆಟಗಾರ ಪಿ.ಕಶ್ಯಪ್ ಹಾಗೂ ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಹೋರಾಟಕ್ಕೆ ತೆರೆ ಬಿದ್ದಿದೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಸಕ್ರಿಯ ಬ್ಯಾಡ್ಮಿಂಟನ್‌ಗೆ ಮರಳಿರುವ ಕಶ್ಯಪ್ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಲಿನ್ ಯೂ ಸಿಯೆನ್ ವಿರುದ್ಧ 13-21, 20-22 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಮೂರನೆ ಶ್ರೇಯಾಂಕದ ಜೋಡಿ ಮನು ಅತ್ರಿ ಹಾಗೂ ಸುಮೀತ್ ಸಿಂಗಾಪುರದ ಡ್ಯಾನಿ ಕ್ರಿನಂಟ್ ಹಾಗೂ ಹೆಂಡ್ರಾ ವಿಜಯ ವಿರುದ್ಧ 20-22, 19-21 ಗೇಮ್‌ಗಳ ಅಂತರದಿಂದ ಶರಣಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News