ನರೇಂದ್ರ ಮೋದಿ ಆ್ಯಪ್‌ಗೂ ಕನ್ನ
ಹೊಸದಿಲ್ಲಿ,ಡಿ.2: ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಗಳು ಸೈಬರ್‌ಖದೀಮರ ಹ್ಯಾಕಿಂಗ್‌ಗೆ ತುತ್ತಾದ ಬೆನ್ನಲ್ಲೇ, ನರೇಂದ್ರ ಮೋದಿಯವರ ಪ್ರಸಿದ್ಧ ಮೊಬೈಲ್ ಆ್ಯಪ್‌ಗೂ ಕೂಡಾ ಭದ್ರತಾ ಅಪಾಯ ಎದುರಾಗಿದೆ. ಈ ಆ್ಯಪ್‌ನ ದತ್ತಾಂಶ ಭದ್ರತೆಗಿರುವ ಅಪಾಯದ ಬಗ್ಗೆ ಗಮನಸೆಳೆಯುವ ಉದ್ದೇಶದಿಂದ ಮೊಬೈಲ್ ಆ್ಯಪ್ ಡೆವಲಪರ್ ಒಬ್ಬರು ಅದನ್ನು ಹ್ಯಾಕ್ ಮಾಡಿದ್ದಾರೆ.
ಮುಂಬೈ ನಿವಾಸಿ 22 ವರ್ಷ ವಯಸ್ಸಿನ ಜಾವೇದ್ ಖತ್ರಿ ಎಂಬವರು ತಾನು ನರೇಂದ್ರ ಮೋದಿಯವರ ಮೊಬೈಲ್ ಆ್ಯಪ್ ಅನ್ನು ಹ್ಯಾಕ್ ಮಾಡಿರುವುದಾಗಿ ಘೋಷಿಸಿದ್ದಾರೆ. ತನಗೆ ಈ ಆ್ಯಪ್ ಅನ್ನು ಹ್ಯಾಕ್ ಮಾಡಲು ಕೇವಲ 15-20 ನಿಮಿಷಗಳು ಬೇಕಾದವೆಂದು ಅವರು ಹೇಳಿಕೊಂಡಿದ್ದಾರೆ. ಈ ಮೊಬೈಲ್ ಆ್ಯಪ್‌ಗೆ ಹಲವು ಸ್ತರದ ಭದ್ರತೆಯಿದ್ದರೂ, ಅವುಗಲ್ಲಿ ಕೆಲವೊಂದು ನ್ಯೂನತೆಗಳಿದ್ದುದರಿಂದ ತನಗೆ ಅದನ್ನು ಸುಲಭವಾಗಿ ಹ್ಯಾಕ್ ಮಾಡಲು ಸಾಧ್ಯವಾಯಿತೆಂದು ಅವರು ಹೇಳಿಕೊಂಡಿದ್ದಾರೆ.
ಈ ಆ್ಯಪ್‌ನ ಯಾವುದೇ ಬಳಕೆದಾರನ ಖಾಸಗಿ ದತ್ತಾಂಶಗಳನ್ನು ಪಡೆಯಲು ತನಗೆ ಸಾಧ್ಯವಾಗಿದೆಯೆಂದು ಅವರು ಹೇಳಿದ್ದಾರೆ. ಬಳಕೆದಾರ ಫೋನ್‌ನಂಬರ್,ಇ ಮೇಲ್, ಹೆಸರು, ಸ್ಥಳ, ಆಸಕ್ತಿಗಳು ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ತನಗೆ ಸಾಧ್ಯವಾಗಿದೆ. ಸ್ಮೃತಿ ಇರಾನಿಯವರಂತಹ ಸಚಿವರ ಫೋನ್ ನಂಬರ್ ಹಾಗೂ ಇಮೇಲ್ ಐಡಿಗಳನ್ನು ಕೂಡಾ ತನಗೆ ಪಡೆಯಲು ಸಾಧ್ಯವಾಗಿದೆ ಎಂದು ಜಾವೇದ್ ಖತ್ರಿ ತಿಳಿಸಿದ್ದಾರೆ.
ಈ ಆ್ಯಪ್‌ನಲ್ಲಿರುವ ಲೋಪಗಳನ್ನು ನಿರ್ಲಕ್ಷಿಸಿದಲ್ಲಿ, ಅದನ್ನು ಬಳಸುತ್ತಿರುವ 70 ಲಕ್ಷಕ್ಕೂ ಅಧಿಕ ಬಳಕೆದಾರರ ಖಾಸಗಿತನವು ಅಪಾಯದಲ್ಲಿದೆಯೆಂದು ಅವರು ಹೇಳಿದ್ದಾರೆ. ತನ್ನ ಬಿಡುವಿನ ವೇಳೆಯಲ್ಲಿ ಆ್ಯಪ್‌ಗಳಲ್ಲಿರುವ ಭದ್ರತಾ ನ್ಯೂನತೆಗಳ ಬಗ್ಗೆ ತಾನು ಸಂಶೋಧನೆ ನಡೆಸುತ್ತಿರುವುದಾಗಿ ಹೇಳುವ ಜಾವೇದ್, ಈಗಾಗಲೇ ತಾನು ಹಲವಾರು ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿದ್ದಾರೆ.
ಜಾವೇದ್ ಮೋದಿಯವರ ಆ್ಯಪ್ ಮೂಲಕ ಈಶಾನ್ಯ ಭಾರತ ಅಭಿವೃದ್ಧಿ ಖಾತೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹಾಗೂ ಪ್ರಧಾನಿ ಕಾರ್ಯಾಲಯದ ಸಂಪರ್ಕ ಸಂಖ್ಯೆಯನ್ನು ಕೂಡಾ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.