ಏಷ್ಯಾಕಪ್: ಭಾರತದ ದಾಳಿಗೆ ನೇಪಾಳ 21 ರನ್‌ಗೆ ಆಲೌಟ್

Update: 2016-12-02 17:29 GMT

ಹೊಸದಿಲ್ಲಿ, ಡಿ.2: ಈಗ ನಡೆಯುತ್ತಿರುವ ಮಹಿಳೆಯರ ಟ್ವೆಂಟಿ-20 ಏಷ್ಯಾಕಪ್ ಟೂರ್ನಮೆಂಟ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದೆ. ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ನೇಪಾಳ ತಂಡವನ್ನು 99 ರನ್‌ಗಳ ಅಂತರದಿಂದ ಮಣಿಸಿದ ಭಾರತ ಕೂಟದಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದೆ.

ಇಲ್ಲಿ ಶುಕ್ರವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ 121 ರನ್ ಬೆನ್ನಟ್ಟಿದ ನೇಪಾಳ ತಂಡ 16.3 ಓವರ್‌ಗಳಲ್ಲಿ ಕೇವಲ 21 ರನ್‌ಗೆ ಆಲೌಟಾಯಿತು. ಮಹಿಳೆಯರ ಟ್ವೆಂಟಿ-20 ಪಂದ್ಯದಲ್ಲಿ ದಾಖಲಾದ ಕನಿಷ್ಠ ಸ್ಕೋರ್ ಇದಾಗಿದೆ.

ಭರ್ಜರಿ ಜಯ ಸಾಧಿಸಿರುವ ಭಾರತ ರವಿವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಈಗಾಗಲೇ ಅರ್ಹತೆ ಗಿಟ್ಟಿಸಿಕೊಂಡಿದೆ.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಶಿಖಾ ಪಾಂಡೆ(ಅಜೇಯ 39) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್(ಅಜೇಯ 14) ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 120 ರನ್ ಗಳಿಸಿತು.

 ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತದ ಆರಂಭ ಕಳಪೆಯಾಗಿತ್ತು. ಮೇಘನಾ(4) ಹಾಗೂ ವಿ.ವನಿತಾ(21) ಬೇಗನೆ ಔಟಾದರು. ಭಾರತ 69 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು. ಆಗ 6ನೆ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿದ ಶಿಖಾ ಪಾಂಡೆ ಹಾಗೂ ಕೌರ್ ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಗೆಲ್ಲಲು 121 ರನ್ ಗುರಿ ಪಡೆದಿದ್ದ ನೇಪಾಳದ ಪರ ಯಾವ ಆಟಗಾರ್ತಿಯೂ ಎರಡಂಕೆ ದಾಟಿಲ್ಲ. ನಾಲ್ವರು ಆಟಗಾರ್ತಿಯರು ಶೂನ್ಯ ಸಂಪಾದಿಸಿದರು. ಲೆಗ್ ಸ್ಪಿನ್ನರ್ ಪೂನಂ ಯಾದವ್(3-9) ಮೂರು ಓವರ್‌ಗಳಲ್ಲಿ 3 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ: 20 ಓವರ್‌ಗಳಲ್ಲಿ 120/5

(ಶಿಖಾ ಪಾಂಡೆ ಅಜೇಯ 39, ರುಬಿನಾ ಬೆಲ್ಬಶಿ 2-1)

ನೇಪಾಳ: 16.3 ಓವರ್‌ಗಳಲ್ಲಿ 21 ರನ್‌ಗೆ ಆಲೌಟ್

(ಪೂನಂ ಯಾದವ್ 3-9)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News