×
Ad

ಮುಂಬೈಯ ಕಲ್ಬಾದೇವಿಯಲ್ಲಿ ಈಗ ಚಲಾವಣೆಯಲ್ಲಿರುವ ಹೊಸ ಕರೆನ್ಸಿ ಯಾವುದು ಗೊತ್ತೇ ?

Update: 2016-12-03 13:05 IST

ಇದು ಪಶ್ಚಿಮ ಭಾರತದ ಅತಿದೊಡ್ಡ ವ್ಯಾಪಾರೀ ಕೇಂದ್ರಗಳಲ್ಲಿ ಒಂದು

ಮುಂಬೈ, ಡಿ.3: ಪಶ್ಚಿಮ ಭಾರತದ ಅತಿದೊಡ್ಡ ವ್ಯಾಪಾರಿ ಕೇಂದ್ರಗಳಲ್ಲಿ ಒಂದಾಗಿರುವ ಮುಂಬೈಯ ಕಲ್ಬಾದೇವಿಯಲ್ಲಿ ನೋಟು ರದ್ದತಿ ಅಷ್ಟೊಂದೇನೂ ಪರಿಣಾಮ ಬೀರಿಲ್ಲ. ಎಲ್ಲಾ ವ್ಯವಹಾರಗಳೂ ನಗದು ಹಣದಲ್ಲಿಯೇ ನಡೆಯುವ ಇಲ್ಲಿ ಸರಕಾರದ ಸಲಹೆಯಂತೆ ಕ್ಯಾಶ್ ಲೆಸ್  ಕ್ರಾಂತಿಯೇನೂ ನಡೆಯುತ್ತಿಲ್ಲ. ಪ್ರತಿ ದಿನ ಕೋಟಿಗಟ್ಟಲೆ ವ್ಯವಹಾರವಿರುವ ಕಲ್ಬಾದೇವಿಯಲ್ಲಿ ವರ್ತಕರು ಹೆಚ್ಚಾಗಿ ನಂಬಿಕೆ ಹಾಗೂ ಸಾಲದ ಆಧಾರದಲ್ಲಿ ಹಾಗೂ ಸಾರ್ವಜನಿಕ ರಂಗದ ಬ್ಯಾಂಕುಗಳ ಸಹಾಯದಿಂದ ವ್ಯವಹಾರ ನಡೆಸುತ್ತಾರೆ.
ಮೊಬೈಲ್ ಟಾಕ್ ಟೈಮ್ ರಿಚಾರ್ಜ್ ಕೂಪನುಗಳನ್ನು ಮಾರಾಟ ಮಾಡುವ ಅಲ್ಪೇಶ್ ಮಜಿಯ ತನ್ನ ಗ್ರಾಹಕರು 2,000 ರೂಪಾಯಿ ನೋಟಿನೊಂದಿಗೆ ಆಗಮಿಸಿದಾಗ ಹಾಗೂ ಅವರು ಕೇವಲ ಒಂದು ನೂರು ಅಥವಾ ಇನ್ನೂರು ರೂ. ರಿಚಾರ್ಜ್ ಮಾಡಲಿಚ್ಛಿಸಿದರೂ ಅವರನ್ನು ನಿರಾಸೆಗೊಳಿಸುವುದಿಲ್ಲ. ಚೇಂಜ್ ನೀಡಲು ಅವರಲ್ಲಿ ಸಮಯಾವಕಾಶ ಕೋರುವ ಅಲ್ಪೇಶ್ ಸಂಜೆಯ ಹೊತ್ತಿಗೆ ಅದನ್ನು ಗ್ರಾಹಕರಿಗೆ ಹಿಂದಿರುಗಿಸುತ್ತಾರೆ. ಅವರು ಪ್ರತಿ ದಿನ ವೋಚರ್ ಗಳನ್ನು ಖರೀದಿಸುವುದರಿಂದ ವೊಡಾಫೋನ್, ಏರ್ ಟೆಲ್ ಕಂಪೆನಿಗಳು ಅವರಿಗೆ ಸಾಕಷ್ಟು ಚೇಂಜ್ ಒದಗಿಸುತ್ತವೆ ಎಂದು ಅವರು ಹೇಳುತ್ತಾರೆ.
ಅಂತೆಯೇ ಕಲ್ಬಾದೇವಿಯಲ್ಲಿರುವ ಹಲವಾರು ಟೆಕ್ಸ್ ಟೈಲ್ ಅಂಗಡಿಯವರು, ಶೂ ಹಾಗೂ ಎಲೆಕ್ಟ್ರಾನಿಕ್ ಸಾಧನಗಳ ಮಾರಾಟಗಾರರು ಕೂಡ ಇದೇ ನಂಬಿಕೆಯಾಧಾರದಲ್ಲಿ ಕಾರ್ಯನಿರ್ವಹಿಸುತ್ತಾರೆ.
ಮಾರುಕಟ್ಟೆ ಪ್ರದೇಶದ ಸನಿಹದಲ್ಲಿಯೇ ಇರುವ ಸಾರ್ವಜನಿಕ ರಂಗದ ಬ್ಯಾಂಕುಗಳ ಕೆಲ ಎಟಿಎಂಗಳು ನಗದು ಹಣ ಒದಗಿಸುವುದರಿಂದ ಇಲ್ಲಿನ ವರ್ತಕರಿಗೆ ಅಷ್ಟೊಂದು ಸಮಸ್ಯೆಯಾಗಿಲ್ಲ. ಇಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಸ್ ಬಿಐ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಿವೆ.
ವರ್ತಕರಾದ ಹಿತೇಶ್ ಜೈನ್ಹಾಗೂ ರಾಜೀವ್ ಸಾಗರ್ ಪ್ರತಿ ದಿನ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಚೆಕ್ಕುಗಳನ್ನು ತೆಗೆದುಕೊಂಡು ಹೋಗಿ ಕ್ಲಿಯರೆನ್ಸ್ ಗೆ ಹಾಕುತ್ತಾರೆ ಇಲ್ಲವೇ ಹಣ ಹಿಂಪಡೆಯುತ್ತಾರೆ. ಬ್ಯಾಂಕ್ ಮ್ಯಾನೇಜರ್ ಜೆ.ಎನ್.ಮಲವ್ ಅವರು ಬ್ಯಾಂಕ್ ಕಾರ್ಯನಿರ್ವಹಿಸುವ ಸಮಯವನ್ನು ವಿಸ್ತರಿಸಿ ಪ್ರತಿ ದಿನ 12 ಗಂಟೆಗಳಿಗೂ ಹೆಚ್ಚು ಕಾಲ ಶಾಖೆಯಲ್ಲಿ ಇರುವುದರಿಂದ ಗ್ರಾಹಕರಿಗೆ ಬಹಳಷ್ಟು ಸಹಾಯಕವಾಗಿದೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News