ರೋಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡ ನಡೆದಿದೆ ಎಂದು ಒಪ್ಪದ ಸೂ ಕಿ

Update: 2016-12-03 11:52 GMT

ಯಾಂಗನ್, ಡಿ. 3: ‘ಶಾಂತಿ ಮತ್ತು ರಾಷ್ಟ್ರೀಯ ಏಕತೆ’ಗಾಗಿ ಕೆಲಸ ಮಾಡುವ ಪ್ರತಿಜ್ಞೆಯನ್ನು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ತೆಗೆದುಕೊಂಡಿದ್ದಾರೆ ನಿಜ. ಆದರೆ ತನ್ನ ದೇಶದಲ್ಲಿರುವ ರೊಹಿಂಗ್ಯ ಮುಸ್ಲಿಮರು ಮಾನವತೆಯ ವಿರುದ್ಧದ ಅಪರಾಧದ ಬಲಿಪಶುಗಳಾಗಿದ್ದಾರೆ ಎಂಬ ಆರೋಪಗಳನ್ನು ಒಪ್ಪಲು ಮಾತ್ರ ಅವರು ಸಿದ್ಧರಿಲ್ಲ.

ಮುಸ್ಲಿಮ್ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಮತ್ತು ತಾರತಮ್ಯವನ್ನು ನಿಲ್ಲಿಸಲು ತನ್ನ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬ ನಿರ್ದಿಷ್ಟ ವಿವರಗಳನ್ನೂ ಅವರು ನೀಡುತ್ತಿಲ್ಲ.

‘‘ನಮ್ಮ ದೇಶ ಅಸ್ಥಿರಗೊಳ್ಳುವುದನ್ನು ನಾವು ಬಯಸುವುದಿಲ್ಲ. ಆದರೆ, ನಮ್ಮ ದೇಶದೊಳಗೇ ಒಗ್ಗಟ್ಟು ಇಲ್ಲದಿರುವ ಸುದೀರ್ಘ ಇತಿಹಾಸವೇ ನಮ್ಮ ಬಳಿ ಇದೆ’’ ಎಂದು ಸಿಂಗಾಪುರ್‌ನಲ್ಲಿ ಹಿರಿಯ ವ್ಯಾಪಾರಿ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು. ‘‘ಹಾಗಾಗಿ, ರಾಷ್ಟ್ರೀಯ ಏಕತೆ ನಮಗೆ ತುಂಬಾ ಮಹತ್ವದ್ದು. ಅದು ಆಯ್ಕೆಯಲ್ಲ, ಅನಿವಾರ್ಯ’’ ಎಂದರು.

‘‘ನಮ್ಮ ದೇಶ ಅಭಿವೃದ್ಧಿಗೊಳ್ಳಲು ಸಾಧ್ಯವಾಗುವ ಶಾಂತಿ ಮತ್ತು ರಾಷ್ಟ್ರೀಯ ಏಕತೆಯನ್ನು ನಾವು ಸಾಧಿಸಬೇಕಾಗಿದೆ. ನಮ್ಮ ದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವವರಲ್ಲಿ ಸರಿಯಾದ ಪ್ರಮಾಣದ ಭರವಸೆಯನ್ನು ತುಂಬಿಸಬೇಕಾಗಿದೆ’’ ಎಂದು ಸೂ ಕಿ ಹೇಳಿದರು.

ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸಲಾಗುತ್ತಿದೆ ಹಾಗೂ ಆ ಸಮುದಾಯದ ಪುರುಷರನ್ನು ಕೊಲ್ಲಲಾಗುತ್ತಿದೆ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಾವಿರಾರು ಮುಸ್ಲಿಮರು ಪ್ರತಿಭಟನೆಗಳನ್ನು ನಡೆಸಿದ್ದಾರೆ.

ರಖೈನ್ಸ್ ರಾಜ್ಯದಿಂದ ಸುಮಾರು 30,000 ಮುಸ್ಲಿಮರು ಮನೆಗಳನ್ನು ತೊರೆದು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ರೊಹಿಂಗ್ಯ ಮುಸ್ಲಿಮರು ವಾಸಿಸುತ್ತಿರುವ ಗ್ರಾಮಗಳಲ್ಲಿ ನೂರಾರು ಕಟ್ಟಡಗಳನ್ನು ಸುಟ್ಟು ಹಾಕಿರುವುದು ‘ಹ್ಯೂಮನ್ ರೈಟ್ಸ್ ವಾಚ್’ ಎಂಬ ಸಂಘಟನೆ ನಡೆಸಿದ ಉಪಗ್ರಹ ಚಿತ್ರಗಳ ವಿಶ್ಲೇಷಣೆಯಲ್ಲಿ ಗೊತ್ತಾಗಿದೆ.

ಆರೋಪ ತಿರಸ್ಕರಿಸುವ ಸರಕಾರ
ಆದರೆ, ಮ್ಯಾನ್ಮಾರ್ ಸರಕಾರ ಹಿಂಸಾಚಾರದ ಆರೋಪಗಳನ್ನು ತಿರಸ್ಕರಿಸಿದೆ. ಕಳೆದ ತಿಂಗಳು ಪೊಲೀಸರ ಮೇಲೆ ದಾಳಿ ನಡೆಸಿದ ‘ಭಯೋತ್ಪಾದಕರ’ನ್ನು ಸೇನೆ ಬೇಟೆಯಾಡುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಲೆಮಾರುಗಳಿಂದ ಪೌರತ್ವ ನಿರಾಕರಣೆ
ರೊಹಿಂಗ್ಯ ಮುಸ್ಲಿಮರು ತಲೆಮಾರುಗಳಿಂದ ಮ್ಯಾನ್ಮಾರ್‌ನಲ್ಲಿ ನೆಲೆಸಿದರೂ, ಅವರಿಗೆ 5 ಕೋಟಿ ಜನರ ದೇಶದಲ್ಲಿ ಪೌರತ್ವವನ್ನು ನೀಡಲಾಗಿಲ್ಲ. ಹಾಗಾಗಿ, ಅವರು ಜಗತ್ತಿನ ಅತ್ಯಂತ ತುಳಿತಕ್ಕೊಳಗಾದ ಜನರಾಗಿ ಅವರು ಬದುಕುತ್ತಿದ್ದಾರೆ.

2012ರಲ್ಲಿ ಕೋಮು ಗಲಭೆ ಸ್ಫೋಟಗೊಂಡ ಬಳಿಕ, 1,20,000 ಕ್ಕೂ ಅಧಿಕ ರೊಹಿಂಗ್ಯರು ಕಿಕ್ಕಿರಿದ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಈ ಶಿಬಿರಗಳನ್ನು ಪೊಲೀಸರು ಕಾಯುತ್ತಿದ್ದಾರೆ. ಅಲ್ಲಿ ಅವರಿಗೆ ಆರೋಗ್ಯ ಸೇವೆ ಮತ್ತು ಶಿಕ್ಷಣ ನೀಡಲಾಗುತ್ತಿಲ್ಲ ಹಾಗೂ ಅವರ ಚಲನವಲನಗಳನ್ನು ನಿರ್ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News