ವೀಸ, ಸೈಬರ್ ಭದ್ರತೆ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಭಾರತ- ಕತಾರ್ ಮಧ್ಯೆ ಒಪ್ಪಂದಕ್ಕೆ ಸಹಿ

Update: 2016-12-03 18:21 GMT

ಹೊಸದಿಲ್ಲಿ, ಡಿ.3: ಕತಾರ್‌ನ ಹೈಡ್ರೊಕಾರ್ಬನ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಭಾರತ ಉತ್ಸುಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ಕತಾರ್ ಪ್ರಧಾನಿ ಶೇಖ್ ಅಬ್ದುಲ್ಲಾ ಬಿನ್ ನಾಸೆರ್ ಬಿನ್ ಖಲೀಫಾ ಅಲ್ ಥಾನಿ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಪ್ರಧಾನಿ ಮೋದಿ, ಕತಾರ್ ರಾಷ್ಟ್ರ ಎಂದಿಗೂ ಭಾರತದ ಮಿತ್ರರಾಷ್ಟ್ರವಾಗಿದ್ದು ಕತಾರ್ ಪ್ರಧಾನಿಯ ಭಾರತ ಭೇಟಿ ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ವ್ಯಾಪಾರ ಸಂಬಂಧದ ದ್ಯೋತಕವಾಗಿದೆ ಎಂದರು.

     ಉಭಯ ದೇಶಗಳ ನಾಯಕರು ರಕ್ಷಣೆ , ಇಂಧನ ಕ್ಷೇತ್ರ ಮತ್ತು ಭದ್ರತೆಯ ವಿಷಯಗಳಲ್ಲಿ ಸಂಭಾವ್ಯ ಸಹಯೋಗದ ಕುರಿತು ಮಾತುಕತೆ ನಡೆಸಿದರು.ಅಲ್ಲದೆ ಹವಾಲಾ ಮತ್ತು ಭಯೋತ್ಪಾದಕತೆಗೆ ಆರ್ಥಿಕ ನೆರವು ಹರಿದು ಬರುವುದನ್ನು ನಿಯಂತ್ರಿಸಲು ಜಂಟಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಬಳಿಕ ವೀಸಾ, ಸೈಬರ್ ಭದ್ರತೆ ಮತ್ತು ಹೂಡಿಕೆಯ ಕ್ಷೇತ್ರ ಒಳಗೊಂಡ ಐದು ಒಪ್ಪಂದಕ್ಕೆ ಸಹಿ ಹಾಕಲಾಯಿತು.

         ಉಭಯ ದೇಶಗಳ ನಡುವಿನ ಪ್ರಸ್ತುತ ವ್ಯಾಪಾರ ಮತ್ತು ಹೂಡಿಕೆಯು ಇನ್ನಷ್ಟು ವೃದ್ಧಿಸುವ ಅವಕಾಶಗಳ ಬಗ್ಗೆ ಪ್ರಸ್ತಾವಿಸಲಾಯಿತು. ಭಾರತದಲ್ಲಿ ಮೂಲಸೌಕರ್ಯ ಮತ್ತು ಇಂಧನ ಕ್ಷೇತ್ರಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮೋದಿ ಒತ್ತಿಹೇಳಿದರು ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ. ಭಾರತದ ಅರ್ಥವ್ಯವಸ್ಥೆಯನ್ನು ವಿದೇಶಿ ಹೂಡಿಕೆಗೆ ಮುಕ್ತವಾಗಿರಿಸಿರುವ ಬಗ್ಗೆ ಮೋದಿ ವಿವರಿಸಿದರು. ನಾಗರಿಕ ವಾಯುಯಾನ ಕ್ಷೇತ್ರದಲ್ಲಿ ಸಹಕಾರ ವೃದ್ಧಿಗೆ ಪ್ರಾಶಸ್ತ್ಯ ನೀಡಬೇಕಾಗಿದೆ ಎಂದು ಉಭಯ ನಾಯಕರು ನಿರ್ಧರಿಸಿದರು ಎಂದು ಸ್ವರೂಪ್ ತಿಳಿಸಿದರು. ಅಲ್ಲದೆ ಕತಾರ್‌ನಿಂದ ಯೂರಿಯಾ ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ದೀರ್ಘಾವಧಿಯ ವ್ಯವಸ್ಥೆ ಮಾಡಿಕೊಳ್ಳುವ ಪ್ರಸ್ತಾವವನ್ನು ಪ್ರಧಾನಿ ಮೋದಿ ಸ್ವಾಗತಿಸಿದರು.

 ರಾಜತಾಂತ್ರಿಕ, ವಿಶೇಷ ಮತ್ತು ಅಧಿಕೃತ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ನಿಯಮದಲ್ಲಿ ಸಡಿಲಿಕೆ, ಸೈಬರ್‌ಸ್ಪೇಸ್ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ, ಸೈಬರ್ ಅಪರಾಧ ನಿಯಂತ್ರಣ, ವ್ಯಾಪಾರಿಗಳಿಗೆ ಮತ್ತು ಪ್ರವಾಸಿಗರಿಗೆ ಇ-ವೀಸಾ ನೀಡುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಇಂಧನ ಕ್ಷೇತ್ರದಲ್ಲಿ ಉಭಯ ದೇಶಗಳು ಮಾರುವ-ಕೊಳ್ಳುವ ಸಂಬಂಧ ಮೀರಿ ಜಂಟಿ

  ಹೂಡಿಕೆ, ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಜಂಟಿ ಅನ್ವೇಷಣೆಯತ್ತ ಮುನ್ನಡೆಯಬೇಕಾಗಿದೆ ಎಂದು ಮೋದಿ ತಿಳಿಸಿದರು. ಕೊಲ್ಲಿ ವಲಯದಲ್ಲಿ ಕತಾರ್ ದೇಶವು ಭಾರತದ ಪ್ರಮುಖ ವ್ಯಾಪಾರ ಪಾಲುದಾರನಾಗಿರುವ ಜೊತೆಗೇ, ಭಾರತಕ್ಕೆ ಅತ್ಯಧಿಕ ಎಲ್‌ಎನ್‌ಜಿ(ದೃವೀಕೃತ ನಿಸರ್ಗಾನಿಲ) ಸರಬರಾಜು ಮಾಡುವ ರಾಷ್ಟ್ರವಾಗಿದೆ. 2015-16ರಲ್ಲಿ ಭಾರತ ಆಮದು ಮಾಡಿಕೊಂಡ ಎಲ್‌ಎನ್‌ಜಿಯಲ್ಲಿ ಶೇ.66ರಷ್ಟು ಕತಾರ್‌ನಿಂದ ಬಂದಿದೆೆ.

  ಕತಾರ್ 2022ರಲ್ಲಿ ನಡೆಯುವ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯ ಆತಿಥೇಯತ್ವ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವಂತೆ ಕತಾರ್ ಪ್ರಧಾನಿ ಭಾರತಕ್ಕೆ ಆಹ್ವಾನ ನೀಡಿದರು. ಅಲ್ಲದೆ ಬಂದರು ಕ್ಷೇತ್ರದಲ್ಲಿಯೂ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿವರಿಸಿದರು. ಇರಾಕ್, ಸಿರಿಯಾ ಮತ್ತು ಯೆಮೆನ್‌ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದರು.

ಇದಕ್ಕೂ ಮುನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕತಾರ್ ನಿಯೋಗದ ಜೊತೆ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News