ನೋಟು ನಿಷೇಧ: ಸಿದ್ಧತೆಗೆ ಸರಕಾರದ ಬಳಿ ಸಾಕಷ್ಟು ಸಮಯವಿರಲಿಲ್ಲ: ಗೋಯಲ್
ಹೊಸದಿಲ್ಲಿ, ಡಿ.3: ಆರ್ಥಿಕತೆಯಿಂದ ಅಕ್ರಮ ಹಣವನ್ನು ಹೊರದೂಡುವ ಉದ್ದೇಶದ ಕ್ರಮವೊಂದರ ಗೌಪ್ಯವನ್ನು ಕಾದುಕೊಳ್ಳಬೇಕಾಗಿದ್ದ ಕಾರಣ, ರೂ. 1000 ಹಾಗೂ 500ರ ನೋಟು ರದ್ದತಿಗೆ ಮೊದಲು ಸಾಗಾಟ ಕ್ಷೇತ್ರ ಕಾರ್ಯವನ್ನು ಸಿದ್ಧಪಡಿಸಲು ಸರಕಾರಕ್ಕೆ ಸಾಕಷ್ಟ ಸಮಯ ದೊರೆತಿರಲಿಲ್ಲವೆಂದು ಕೇಂದ್ರ ವಿದ್ಯುತ್ ಸಚಿವ ಪೀಯುಷ್ ಗೋಯಲ್ ಶನಿವಾರ ಹೇಳಿದ್ದಾರೆ.
‘ಹಿಂದೂಸ್ಥಾನ್ ಟೈಮ್ಸ್ ನಾಯಕತ್ವ ಸಮ್ಮೇಳನ’ದ ಎರಡನೆಯ ದಿನ ಮಾತನಾಡಿದ ಅವರು, ದೊಡ್ಡ ಬೆಲೆಯ ನೋಟುಗಳ ರದ್ದತಿಯನ್ನು ಸಮರ್ಥಿಸುತ್ತ, ಭಾರತದ ಜನರು, ‘ಮಾನಸಿಕತೆಯನ್ನೇ ಬದಲಾಯಿಸಿದ’ ಈ ಕ್ರಮಕ್ಕೆ ಅದ್ಭುತ ಬೆಂಬಲ ನೀಡಿದ್ದಾರೆ ಎಂದರು.
ಈ ನಿರ್ಧಾರವು ಆರ್ಥಿಕತೆಯ ಮೇಲೆ ದೀರ್ಘಾವಧಿ ಪ್ರಭಾವ ಬೀರಲಿದೆ. ಇದು ಮೊದಲ ಬಾರಿ ಪ್ರಾಮಾಣಿಕರು ಗೌರವವನ್ನು ಅನುಭವಿಸುವಂತೆ ಮಾಡಿದೆಯೆಂದು ಗೋಯಲ್ ಹೇಳಿದರು.
ಮೂರು ವಾರಗಳ ಹಿಂದೆ ನೋಟು ರದ್ದತಿ ಘೋಷಿಸಿದ ಬಳಿಕ ಲಕ್ಷಾಂತರ ಮಂದಿ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಸರತಿಯ ಸಾಲಲ್ಲಿ ನಿಲ್ಲುವಂತಾಗಿದೆ. ವಿಪಕ್ಷಗಳು ಈ ಕ್ರಮಕ್ಕಾಗಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಇದರಿಂದ ಬಡವರು, ರೈತರು ಹಾಗೂ ಸಣ್ಣ ವ್ಯಾಪಾರಿಗಳು ಬವಣೆ ಪಡುವಂತಾಗಿದೆ ಎನ್ನುತ್ತಿವೆ.
ಆದಾಗ್ಯೂ, ಜನರು ಪ್ರಧಾನಿ ನರೇಂದ್ರ ಮೊದಿಯವರೊಂದಿಗಿದ್ದಾರೆಂದಿರುವ ಗೋಯಲ್, ಬ್ಯಾಂಕ್‌ನಿಂದ ಹಣ ಹಿಂದೆಗೆತ ಹಾಗೂ ನೋಟು ಬದಲಾವಣೆಯಲ್ಲಿ ಮಾಡಿರುವ ಸರಣಿ ಬದಲಾವಣೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ತಾವು ಮಾಡಿರುವುದೆಲ್ಲ ಮೊದಲ ಬಾರಿಗೇ ಸರಿಯಾಗಿದೆಯೆಂದು ತಾವು ಪ್ರತಿಪಾದಿಸುವುದಿಲ್ಲ. ತಪ್ಪನ್ನು ಗುರುತಿಸಿ ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದ್ದೇವೆಂದು ಅವರು ಹೇಳಿದ್ದಾರೆ.
ದೊಡ್ಡ ನೋಟುಗಳ ರದ್ದತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿಯವರ ಹೊರತು ಯಾರಿಗೂ ತಿಳಿದಿರಲಿಲ್ಲ. ತಾನು ಸಂಪುಟ ಸಭೆಗೆ ಹೋದಾಗ ಅಂತಹ ದೊಡ್ಡ ಕ್ರಮ ಘೋಷಿಸಲ್ಪಡುವುದೆಂಬ ಕಲ್ಪನೆಯೇ ತನಗಿರಲಿಲ್ಲ. ವಿತ್ತ ಸಚಿವರು ತನ್ನತ್ತ ಹುಸಿ ನಗೆ ಬೀರಿದಾಗಲೇ ಏನೋ ಆಗಲಿದೆಯೆಂಬುದು ತನಗೆ ಅರಿವಾದುದು ಎಂದು ಗೋಯಲ್ ತಿಳಿಸಿದ್ದಾರೆ.