×
Ad

ನೋಟಿನ ಏಟು: ನಿರ್ಮಾಣ ಕಾಮಗಾರಿ ನಿಲ್ಲಿಸಿದ ಬಸ್ತಾರ್ ಕಾರ್ಮಿಕರು!

Update: 2016-12-03 18:54 IST

ರಾಯ್ಪುರ, ಡಿ.3: ನಕ್ಸಲೀಯರ ಪ್ರಬಲ ನೆಲೆಯಾಗಿರುವ, ಛತ್ತೀಸ್‌ಗಡದ ಬಸ್ತಾರ್‌ನ ನಿರ್ಮಾಣ ಕಾರ್ಮಿಕರು ನೋಟು ನಿಷೇಧದಿಂದಾಗಿ ಒದ್ದಾಡುವಂತಾಗಿದೆ. ಈ ದುರ್ಗಮ ಪ್ರದೇಶಗಳಲ್ಲಿ ರಸ್ತೆ ಹಾಗೂ ಸೇತುವೆ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹಣದ ಸೀಮಿತ ಲಭ್ಯತೆಯಿಂದ ತೊಂದರೆಗೊಳಗಾಗಿದ್ದಾರೆ.

35ರ ಹರೆಯದ ಶಾಮ್ಲು ರಾಮ್‌ನಾಗ್ ಎಂಬಾತ 10-12 ಮಂದಿ ಇತರ ಕಾರ್ಮಿಕರೊಂದಿಗೆ ಛತ್ತೀಸ್‌ಗಡದ ಟೋಂಗ್ಪಾಲ್ ಗ್ರಾಮದಲ್ಲಿ ಸೇತುವೆಯೊಂದನ್ನು ನಿರ್ಮಿಸುತ್ತಿದ್ದಾನೆ. ಆತ 7 ಮಂದಿಯ ತನ್ನ ಕುಟುಂಬಕ್ಕೆ ಅನ್ನ ಹಾಕಲು ಹೆಣಗಾಡುತ್ತಿದ್ದಾನೆ. ನೊಟು ನಿಷೇಧದ ಬಳಿಕ ರಾಮ್‌ನಾಗ್‌ಗೆ ಆತನ ದಿನಗೂಲಿ ರೂ. 200 ದೊರೆಯುತ್ತಿಲ್ಲ. ಮೂರು ವಾರಗಳಿಂದ ಅವನು ದಿನಕ್ಕೆ ರೂ. 35ರಲ್ಲೇ ದಿನ ದೂಡಿದ್ದಾನೆ. ಉಳಿದ ಹಣ ಮತ್ತೆ ನೀಡಲಾಗುವುದೆಂಬ ಒಣ ಭರವಸೆ ಆತನಿಗೆ ದೊರೆತಿದೆ.

ಈ ಹಿಂದೆ ತಮಗೆ ದಿನಾಲೂ ಸಂಬಳ ಸಿಗುತ್ತಿತ್ತು. ಆದರೆ, ಮೂರು ವಾರಗಳಿಂದ ಸಮಸ್ಯೆ ಎದುರಾಗಿದೆ. ನಗದಿನ ಕೊರತೆಯಿರುವುದರಿಂದ ತಮಗೆ ಬಾಕಿ ಸಂಬಳ ದೊರೆಯುತ್ತದೋ ಇಲ್ಲವೋ ಗೊತ್ತಿಲ್ಲ. ಸಂಬಳ ಬಾಕಿಗೆ ಕೆಲಸ ಮಾಡಲು ಸಾಧ್ಯವಾಗದೆ ಅರ್ಧದಷ್ಟು ಕಾರ್ಮಿಕರು ನಿರ್ಮಾಣ ನಿವೇಶನಕ್ಕೆ ಬರುತ್ತಿಲ್ಲವೆಂದು ರಾಮ್‌ನಾಗ್ ತಿಳಿಸಿದ್ದಾನೆ.

ರಸ್ತೆ ನಿರ್ಮಾಣ ಕಾರ್ಮಿಕರ ಸಂಖ್ಯೆಯೂ ಭಾರೀ ಕುಸಿದಿದೆ.

ನೋಟು ರದ್ದತಿಯ ಬಳಿಕ ತಮಗೆ ಭಾರೀ ತೊಂದರೆಯಾಗಿದೆ. ತಮ್ಮ ಶೇ.50ರಷ್ಟು ಕಾರ್ಮಿಕರು ಬಾಧಿತರಾಗಿದ್ದಾರೆ. ನೋಟು ರದ್ದತಿಯಿಂದಾಗಿ ಹಲವು ಯೋಜನೆಗಳನ್ನು ಆರಂಭಿಸಲೇ ಸಾಧ್ಯವಾಗಿಲ್ಲ. ನಗದು ಹಿಂದೆಗೆತ ಮಿತಿಯನ್ನು ಹೆಚ್ಚಿಸುವಂತೆ ತಾವು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇವೆ. ಯೋಜನೆಗಳ ಅಂತಿಮ ಗಡುವನ್ನು 3 ತಿಂಗಳು ಮುಂದೂಡುವಂತೆಯೂ ತಾವು ವಿನಂತಿಸಿದ್ದೇವೆಂದು ಗುತ್ತಿಗೆದಾರ ಹಾಗೂ ಭಾರತೀಯ ನಿರ್ಮಾಣಕಾರರ ಸಂಘದ ರಾಜ್ಯಾಧ್ಯಕ್ಷ ಎನ್.ಆರ್.ಪರಾಶರ್ ಹೇಳಿದ್ದಾರೆ.

ಗುತ್ತಿಗೆದಾರರು ಬಿಜೆಪಿ ಸರಕಾರದ ಉತ್ತರವನ್ನು ಕಾಯುತ್ತಿದ್ದಾರೆ.

ಈ ಹಿಂದೆ ಗುತ್ತಿಗೆದಾರರು ಕಾರ್ಮಿಕರಿಗೆ ಸರಿಯಾಗಿ ಸಂಬಳ ಪಾವತಿಸುತ್ತಿಲ್ಲವೆಂಬ ದೂರುಗಳಿದ್ದವು. ಈ ಯೋಜನೆಯಿಂದ ಸರಕರವು ಪ್ರಕ್ರಿಯೆಯನ್ನು ನಗದು ರಹಿತವಾಗಿಸಲಿದೆ ಹಾಗೂ ಭವಿಷ್ಯದಲ್ಲಿ ವೇತನವು ನೇರವಾಗಿ ಕಾರ್ಮಿಕರ ಖಾತೆಗಳಿಗೆ ಬೀಳಲಿದೆಯೆಂದು ಛತ್ತೀಸ್‌ಗಡದ ಬಿಜೆಪಿ ವಕ್ತಾರ ಸಂಜಯ್ ಶ್ರೀವಾಸ್ತವ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News