ಬ್ಯಾಂಕ್‌ಗಳಲ್ಲಿ ಮುಂದುವರಿದ ಸರತಿ
ಮುಂಬೈ, ಡಿ.3: ಹಣ ಹಿಂಪಡೆಯುವುದಕ್ಕಾಗಿ ಮುಂಬೈ ಹಾಗೂ ಉಪನಗರಗಳಲ್ಲಿ ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಜನರ ಸರತಿಯ ಸಾಲುಗಳು ಮುಂದುವರಿದಿವೆ. ಮೂರು ವಾರಗಳ ವಿರಾಮದ ಬಳಿಕ ಟೋಲ್ ಸಂಗ್ರಹ ಕೇಂದ್ರಗಳು ಮತ್ತೆ ತೆರೆದಿದ್ದು, ಮುಖ್ಯವಾಗಿ ವಾರಾಂತ್ಯದ ರಜೆಯ ಕಾರಣ ವಾಹನಗಳು ಟೋಲ್ ಪ್ಲಾಝಾಗಳ ಬಳಿ ತೆವಳುವಂತಾಗಿದೆ.
ಖಜಾನೆಯಲ್ಲಿ ಹಣವಿಲ್ಲದ ಕಾರಣ ಹಲವು ಬ್ಯಾಂಕ್‌ಗಳಲ್ಲಿ ಹಣ ಹಿಂಪಡೆತಕ್ಕೆ ಮಿತಿ ಹೇರಿದ್ದರೆ, ಅನೇಕ ಎಟಿಎಂಗಳು ಕೆಲಸವನ್ನೇ ಮಾಡುತ್ತಿಲ್ಲ.
ಜನರು ತಿಂಗಳಾರಂಭದ ಖರ್ಚುಗಳಿಗಾಗಿ ಹಣ ಪಡೆಯಲು ಹಲವು ಬ್ಯಾಂಕ್‌ಗಳು ಹಾಗೂ ಹಣ ನೀಡುತ್ತಿರುವ ಕೆಲವು ಎಟಿಎಂಗಳ ಮುಂದೆ ಸಾಲುಗಟ್ಟಿರುವುದು ಕಂಡು ಬಂರುತ್ತಿತ್ತು.
ನಿನ್ನೆ ಮಧ್ಯರಾತ್ರಿ 12ರ ಬಳಿಕ ಟೋಲ್ ಬೂತ್‌ಗಳು ಪುನರಾರಂಭಗೊಂಡುದರಿಂದ ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೈವೆ, ಸಯಾನ್-ಪನ್ವೇಲ್ ಹೆದ್ದಾರಿಯ ವಾಶಿ ಟೋಲ್ ಬೂತ್ ಹಾಗೂ ಎರಡು ನಗರಗಳ ನಡುವಿನ ಹಳೆಯ ಹೆದ್ದಾರಿಗಳು ಸೇರಿದಂತೆ ಎಲ್ಲ ಟೋಲ್ ಪ್ಲಾಝಾಗಳಲ್ಲಿ ವಾಹನಗಳ ಸಾಲು ಹನುಮಂತನ ಬಾಲದಂತಿತ್ತು.
ಡಿಜಿಟಲ್ ಟೋಲ್ ಪಾವತಿಗಾಗಿ ಸಾಕಷ್ಟು ವುವಸ್ಥೆ ಮಾಡಿದ್ದರೂ, ಚಿಲ್ಲರೆಯ ಕೊರತೆ ಹಾಗೂ ವಾರಾಂತ್ಯದ ಸಂದಣಿಯಿಂದಾಗಿ ಉದ್ದದ ವಾಹನಗಳ ಸಾಲುಗಳು ಕಂಡು ಬಂದಿದೆ. ರಸ್ತೆ ತೆರವಿಗಾಗಿ ಟ್ರಾಫಿಕ್ ಪೊಲೀಸ್ ನಿಯೋಜನೆ ಸಹಿತ ಭದ್ರತಾ ವ್ಯವಸ್ಥೆ ಮಾಡಲಾಗಿದೆ.