ನೀತಿ ಬದಿಗಿಟ್ಟು ತೈವಾನ್ ಅಧ್ಯಕ್ಷೆ ಜೊತೆ ಮಾತನಾಡಿದ ಟ್ರಂಪ್

Update: 2016-12-03 14:22 GMT

ವಾಶಿಂಗ್ಟನ್, ಡಿ. 3: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ತೈವಾನ್ ಅಧ್ಯಕ್ಷೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದರು. ಇದು ಏಶ್ಯದಲ್ಲಿನ ದಶಕಗಳ ಅವಧಿಯ ಅಮೆರಿಕದ ನೀತಿ ಹಾಗೂ ರಾಜತಾಂತ್ರಿಕ ಶಿಷ್ಟಾಚಾರದ ಮಹತ್ವದ ಉಲ್ಲಂಘನೆಯಾಗಿದೆ.

ಅಮೆರಿಕವು ದ್ವೀಪರಾಷ್ಟ್ರ ತೈವಾನ್‌ನೊಂದಿಗೆ 1979ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡ ಬಳಿಕ, ಆ ದೇಶದ ಅಧ್ಯಕ್ಷರೊಬ್ಬರು ಅಥವಾ ನಿಯೋಜಿತ ಅಧ್ಯಕ್ಷರೊಬ್ಬರು ತೈವಾನ್ ನಾಯಕರ ಜೊತೆ ಮಾತನಾಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಟ್ರಂಪ್‌ರ ಈ ಕ್ರಮವು ಚೀನಾದ ಆಕ್ರೋಶಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ, ಚೀನಾವು ತೈವಾನನ್ನು ತನ್ನದೇ ಒಂದು ಪ್ರಾಂತ ಎಂಬುದಾಗಿ ಪರಿಗಣಿಸಿದೆ.

ಚೀನಾ ಮತ್ತು ತೈವಾನ್ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಕಾಣಿಸಿಕೊಂಡ ಸಂದರ್ಭದಲ್ಲೇ ಈ ಮಾತುಕತೆ ನಡೆದಿರುವುದು ಗಮನಾರ್ಹವಾಗಿದೆ.

ಈ ವರ್ಷದ ಆರಂಭದಲ್ಲಿ ತೈವಾನ್‌ನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ತ್ಸಾಯ್ ಇಂಗ್-ವೆನ್, ತನ್ನ ದೇಶ ಚೀನಾದ ಭಾಗ ಎಂಬುದನ್ನು ಒಪ್ಪಲು ನಿರಾಕರಿಸಿದ್ದಾರೆ. ಆಕೆ ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಚೀನಾ ಎಷ್ಟು ಕ್ರೋಶಗೊಂಡಿತೆಂದರೆ, ದ್ವೀಪ ರಾಷ್ಟ್ರದೊಂದಿಗಿನ ಎಲ್ಲ ಅಧಿಕೃತ ಸಂಪರ್ಕಗಳನ್ನು ಕಡಿದುಕೊಂಡಿದೆ.

ಫೋನ್ ಕರೆಯ ವೇಳೆ, ಟ್ರಂಪ್ ಮತ್ತು ತ್ಸಾಯಿ ಚುನಾವಣಾ ವಿಜಯಗಳಿಗಾಗಿ ಪರಸ್ಪರರನ್ನು ಅಭಿನಂದಿಸಿದರು ಎಂದು ಟ್ರಂಪ್ ಕಚೇರಿ ಹೊರಡಿಸಿದ ಹೇಳಿಕೆಯೊಂದು ತಿಳಿಸಿದೆ.

ಫೋನ್ ಮಾತುಕತೆಯು 10 ನಿಮಿಷಗಳಿಗೂ ಹೆಚ್ಚಿನ ಅವಧಿ ನಡೆಯಿತು ಹಾಗೂ ಆರ್ಥಿಕ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಭದ್ರಪಡಿಸುವ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಹೇಳಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News