ಟ್ರಂಪ್ ಪುತ್ರನ ಜೊತೆ ಪ್ರಯಾಣಿಸಿದ ಮುಸ್ಲಿಂ ಅಮೇರಿಕನ್ ಹಾಸ್ಯ ಕಲಾವಿದ

Update: 2016-12-04 12:07 GMT

ಹೊಸದಿಲ್ಲಿ,ಡಿ. 4: ಮುಸ್ಲಿಂ ಅಮೆರಿಕನ್ ಕಾಮೆಡಿಯನ್ ಮೊಹಮ್ಮದ್ 'ಮೋ' ಆಮಿರ್ ಇತ್ತೀಚಿಗೆ ಸ್ಕಾಟ್ಲಂಡ್‌ಗೆ ಪ್ರಯಾಣಿಸಿದ್ದಾಗ ವಿಮಾನದಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಸಹಪ್ರಯಾಣಿಕರಾಗಿದ್ದರು. ಇದನ್ನು ಮೋ ನಿರೀಕ್ಷಿಸಿರಲಿಲ್ಲ. ಇದರೊಂದಿಗೆ ಮೋಗೆ ಸವಾಲೊಂದು ಕೂಡ ಎದುರಾಗಿತ್ತು. ಎರಿಕ್ ಜೊತೆ ಸಂಭಾಷಣೆ ತನ್ನ ಕಾಮೆಡಿ ಶೋಗಳಿಗೆ ಸಾಕಷ್ಟು ವಿಷಯ ನೀಡುತ್ತದೆ ಎನ್ನುವುದು ಅವರಿಗೆ ಗೊತ್ತಿತ್ತು. ಕೆಲವೊಮ್ಮೆ ದೇವರೇ ಇಂತಹ ಅವಕಾಶವನ್ನು ಒದಗಿಸುತ್ತಾನೆ ಎನ್ನುತ್ತಾರೆ ಮೋ. ಅಮೆರಿಕದಿಂದ ಎಲ್ಲ ಮುಸ್ಲಿಮರನ್ನು ನಿಷೇಧಿಸುತ್ತೇನೆ ಮತ್ತು ಅಮೆರಿಕದಾದ್ಯಂತ ವಾಸವಾಗಿರುವ ಮುಸ್ಲಿಮರನ್ನು ಪತ್ತೆ ಹಚ್ಚಲು ಮತ್ತು ಅವರ ಮೇಲೆ ನಿಗಾಯಿರಿಸಲು 'ಮುಸ್ಲಿಂ ರಿಜಿಸ್ಟ್ರಿ'ಯನ್ನು ಸ್ಥಾಪಿಸುವದಾಗಿ ಭರವಸೆ ನೀಡಿರುವ ವ್ಯಕ್ತಿಯ ಪುತ್ರನೊಂದಿಗೆ ತಾನು ಹೇಗೆ ಮಾತನಾಡಬೇಕು ಎನ್ನುವುದು ಗೊತ್ತಾಗದೆ ಮೋ ಫಜೀತಿಗೆ ಬಿದ್ದಿದ್ದರು.

ಮೋ ನೇರವಾಗಿ ಟ್ರಂಪ್ ಹೇಳಿಕೆಯ ಬಗ್ಗೆಯೇ ಎರಿಕ್‌ರನ್ನು ಪ್ರಶ್ನಿಸಿದ್ದರು. ಅವರು ನೀಡಿದ ಉತ್ತರವನ್ನು ಮೋ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ಎರಿಕ್ ಜೊತೆ ಮೋ ತೆಗೆಸಿಕೊಂಡಿರುವ ಸೆಲ್ಫಿಯನ್ನು ಲಗತ್ತಿಸಲಾಗಿದೆ.'' ಒಳ್ಳೆಯ ಸುದ್ದಿ ಗೆಳೆಯರೇ, ಮುಸ್ಲಿಮರು ಅಮೆರಿಕವನ್ನು ತೊರೆಯಬೇಕಾಗಿಲ್ಲ. ಅವರಿಗೆ ಗುರುತುಚೀಟಿಗಳನ್ನು ನೀಡಲಾಗುತ್ತದೆ. ಎರಿಕ್ ಇದನ್ನು ನನಗೆ ತಿಳಿಸಿದಾರೆ ' ಎಂದು ಮೋ ಬರೆದಿದ್ದಾರೆ.
ಮೋ ಅವರ ಫೇಸ್‌ಬುಕ್ ಪೋಸ್ಟಿಂಗ್‌ಗೆ ಅವರ ಸ್ನೇಹಿತರು ಮತ್ತು ಬೆಂಬಲಿಗರಿಂದ ತುಂಬ ಮೋಜಿನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವನ್ನು ಮೋ ಅವರೇ ರಿಪೋಸ್ಟ್ ಮಾಡಿದ್ದಾರೆ.

ಇದು ನಾನು ಇಡೀ ದಿನದಲ್ಲಿ ನೋಡಿರುವ ಅತ್ಯುತ್ತಮ ಪೋಸ್ಟ್. ದೇವರಿಗೂ ಕೆಟ್ಟ ಹಾಸ್ಯಪ್ರಜ್ಞೆಯಿದೆ. ಇದನ್ನು ಇಷ್ಟ ಪಡುತ್ತೇನೆ ಎಂದು ಒಬ್ಬ ಪ್ರತಿಕ್ರಿಯಿಸಿದ್ದರೆ, ಇದಕ್ಕೆ ಉತ್ತರವಾಗಿ ಮೋ,ನನಗೆ ಗೊತ್ತು. ಎಲ್ಲಿಂದ ಆರಂಭಿಸಬೇಕು ಎನ್ನುವುದು ಖಚಿತವಿರಲಿಲ್ಲ. ಅವರು(ಎರಿಕ್) ಹಂದಿ ಮಾಂಸದ ಖಾದ್ಯಕ್ಕೆ ಆರ್ಡರ್ ನೀಡಿದ್ದರು. ಅವರು ನನ್ನನ್ನು ತೆಗೆದೇಬಿಡುತ್ತಾರೆ ಎಂದು ಭಾವಿಸಿದ್ದೆ ಎಂದು ಬರೆದಿದ್ದಾರೆ (ಮುಸ್ಲಿಮರಿಗೆ ಹಂದಿಮಾಂಸ ನಿಷಿದ್ಧ)
ಮೆಕ್ಸಿಕೊದಿಂದ ವಲಸಿಗರನ್ನು ತಡೆಯಲು ಗಡಿಯಲ್ಲಿ ಸುಭದ್ರ ಗೋಡೆಯನ್ನು ನಿರ್ಮಿಸುವ ಬಗ್ಗೆಯೂ ಟ್ರಂಪ್ ಹೇಳಿದ್ದರು.

ಈ ಬಗ್ಗೆ ಓರ್ವ ಮೋಗೆ ಬರೆದಿದ್ದು ಹೀಗೆ. ''ಯಾನಿ ಉತ್ತಮ ವ್ಯವಹಾರವನ್ನು ಹೊಂದಿದ್ದಾರೆ. ಈ ಗೋಡೆ ನಿರ್ಮಿಸಲು ಅವರ ಬಂಧುಗಳೋ,ಸ್ನೇಹಿತರೋ ಬಿಡ್‌ಗಳನ್ನು ಸಲ್ಲಿಸಲಿದ್ದಾರೆ ಎಂದು ನನಗೆ ಗೊತ್ತು''
  ಸೆಲ್ಫಿಯಲ್ಲಿ ಎರಿಕ್ 'ಟ್ರಂಪ್ 'ಎಂದು ಬರೆದಿದ್ದ ಸ್ವೆಟರ್ ಧರಿಸಿದ್ದಾರೆ. ಇದನ್ನೂ ಫೇಸಬುಕ್ಕಿಗರು ಬಿಟ್ಟಿಲ್ಲ. ತನ್ನ ಸ್ವೆಟರ್ ಕಳೆದು ಹೋಗಬಹುದೆಂಬ ಆತಂಕ ಅವರಿಗೆ ಎಂದು ಒಬ್ಬ ಬರೆದಿದ್ದರೆ, ತಾನೆಲ್ಲಾದರೂ ಕಳೆದುಹೋದರೆ ಎಂದು ಹೆದರಿ ಅವರು ಸ್ವೆಟರ್ ಮೇಲೆ ಹೆಸರು ಬರೆದುಕೊಂಡಿದ್ದಾರೆ ಎಂದು ಇನ್ನೊಬ್ಬ ಕುಟುಕಿದ್ದಾನೆ.

ಸೀಟನ್ನು ಬದಲಿಸದಿರುವ ಮೋ ನಿರ್ಧಾರವನ್ನು ಹಲವರು ಪ್ರಶಂಸಿಸಿದ್ದಾರೆ.
ಆದರೆ ಇದರಷ್ಟು ತಮಾಷೆಯ ಕಮೆಂಟ್ ಬೇರೊಂದಿರಲಿಕ್ಕಿಲ್ಲ. 'ಟ್ರಂಪ್ ವಲಸಿಗನೋರ್ವನನ್ನು ಖುದ್ದು ಬೆಂಗಾವಲಿನೊಂದಿಗೆ ಅಮೆರಿಕದಿಂದ ಹೊರಗೆ ಒಯ್ಯತ್ತಿರುವುದು ಮಾತ್ರ ನನಗೆ ಕಾಣುತ್ತಿದೆ. ಅಂತೂ ಮುಸ್ಲಿಮರ ಗಡೀಪಾರು ಆರಂಭಗೊಂಡಿದೆ. ಅದು ವಿಮಾನದ ಮೊದಲ ದರ್ಜೆಯಲ್ಲಿ....ಸ್ಕಾಟ್ಲಂಡ್‌ನ ಗಾಲ್ಫ್ ಕೋರ್ಸ್‌ಗೆ ' ಎಂದು ಮೋ ಸ್ನೇಹಿತನೋರ್ವ ಬರೆದಿದ್ದಾನೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News