ಆರ್‌ಬಿಐನಿಂದ ಹೊಸ 20 ಮತ್ತು 50 ರೂ.ನೋಟುಗಳು
Update: 2016-12-04 18:48 IST
ಮುಂಬೈ,ಡಿ.4: ಶೀಘ್ರವೇ 50 ರೂ.ಮತ್ತು 20 ರೂ.ಗಳ ಹೊಸನೋಟುಗಳನ್ನು ಬಿಡುಗಡೆಗೊಳಿಸುವುದಾಗಿ ಆರ್‌ಬಿಐ ರವಿವಾರ ಪ್ರಕಟಿಸಿದೆ. ಈ ನೋಟುಗಳು ಹಿಂಬದಿ ಯಲ್ಲಿ ಮುದ್ರಣ ವರ್ಷ 2016ನ್ನು ಹೊಂದಿರುತ್ತವೆ. ಇವುಗಳೊಂದಿಗೆ ಹಳೆಯ 20 ಮತ್ತು 50 ರೂ.ಗಳ ನೋಟುಗಳು ಚಲಾವಣೆಯಲ್ಲಿರುತ್ತವೆ.
ಇವೆರಡೂ ನೋಟುಗಳು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಹೊಂದಿರುತ್ತವೆ. ಎರಡೂ ನಂಬರ್ ಪ್ಯಾನೆಲ್‌ಗಳಲ್ಲಿ 50 ರೂ.ನೋಟು ಯಾವುದೇ ಅಕ್ಷರವನ್ನು ಹೊಂದಿರುವುದಿಲ್ಲ, ಆದರೆ 20 ರೂ.ನೋಟಿನಲ್ಲಿ ‘ಎಲ್’ಅಕ್ಷರವಿರುತ್ತದೆ. ಹಾಲಿ ಚಲಾವಣೆಯಲ್ಲಿರುವ ನೋಟುಗಳಲ್ಲಿರುವ ಭದ್ರತಾ ಲಕ್ಷಣಗಳು ಹೊಸ ನೋಟುಗಳಲ್ಲಿಯೂ ಇರುತ್ತವೆ. ನಂಬರ್ ಪ್ಯಾನೆಲ್‌ನಲ್ಲಿ ಅಕ್ಷರ ಹೆಚ್ಚುವರಿ ಭದ್ರತಾ ಲಕ್ಷಣವಾಗಿದ್ದು ನೋಟು ಮುದ್ರಣಗೊಂಡ ಮುದ್ರಣಾಲಯವನ್ನು ಸೂಚಿಸುತ್ತದೆ ಎನ್ನಲಾಗಿದೆ.