ಮ್ಯಾಡ್ರಿಡ್-ಬಾರ್ಸಿಲೋನ ಪಂದ್ಯ ರೋಚಕ ಡ್ರಾ
ಬಾರ್ಸಿಲೋನ(ಸ್ಪೇನ್), ಡಿ.3: ಸರ್ಜಿಯೊ ರಾಮೊಸ್ ಕೊನೆಯ ಕ್ಷಣದಲ್ಲಿ(90ನೆ ನಿಮಿಷ) ಬಾರಿಸಿದ ಗೋಲಿನ ನೆರವಿನಿಂದ ರಿಯಲ್ ಮ್ಯಾಡ್ರಿಡ್ ತಂಡ ಬಾರ್ಸಿಲೋನ ವಿರುದ್ಧ 1-1 ರಿಂದ ರೋಚಕ ಡ್ರಾ ಸಾಧಿಸಿದೆ.
ಇಲ್ಲಿನ ಕ್ಯಾಂಪ್‌ನೌ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ನೇಮರ್ ನೀಡಿದ ಫ್ರೀ ಕಿಕ್ ನೆರವಿನಿಂದ ಲೂಯಿಸ್ ಸುಯರೆಝ್ ಹೆಡರ್‌ನ ಮೂಲಕ 53ನೆ ನಿಮಿಷದಲ್ಲಿ ಗೋಲು ಬಾರಿಸಿದರು. ಈ ಮೂಲಕ ಬಾರ್ಸಿಲೋನ 1-0 ಮುನ್ನಡೆ ಪಡೆಯಿತು.
90ನೆ ನಿಮಿಷದಲ್ಲಿ ಗೋಲು ಬಾರಿಸಿದ ರಾಮೊಸ್ ಮ್ಯಾಡ್ರಿಡ್ ತಂಡ 1-1 ರಿಂದ ಡ್ರಾ ಸಾಧಿಸಲು ನೆರವಾದರು. ಈ ಸಾಧನೆಯ ಮೂಲಕ ಮ್ಯಾಡ್ರಿಡ್ ತಂಡ ಸತತ 33 ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಮ್ಯಾಡ್ರಿಡ್ 2012ರ ಬಳಿಕ ಮೊದಲ ದೇಶೀಯ ಲೀಗ್ ಪ್ರಶಸ್ತಿ ಜಯಿಸುವತ್ತ ಚಿತ್ತವಿರಿಸಿದೆ.
ಕಳೆದ 12 ವರ್ಷಗಳಿಂದ ಮ್ಯಾಡ್ರಿಡ್ ತಂಡದಲ್ಲಿ ಆಡುತ್ತಿರುವ 30ರ ಪ್ರಾಯದ ರಾಮೊಸ್ ಪ್ರಮುಖ ಪಂದ್ಯಗಳಲ್ಲಿ ಕೊನೆಯಕ್ಷಣದಲ್ಲಿ ಗೋಲು ಬಾರಿಸುವ ಚಾಣಾಕ್ಷತನ ಹೊಂದಿದ್ದಾರೆ. 2014ರ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಹೆಡರ್‌ನ ಮೂಲಕ ಗೋಲು ಬಾರಿಸಿದ್ದ ರಾಮೊಸ್ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ವಿಸ್ತರಿಸಿದ್ದರು. ಆ ಪಂದ್ಯದಲ್ಲಿ ಮ್ಯಾಡ್ರಿಡ್ ತಂಡ ಅಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ್ದ ಜಯ ಸಾಧಿಸಿತ್ತು. ಈ ವರ್ಷದ ಯುಇಎಫ್‌ಎ ಸೂಪರ್ ಕಪ್‌ನಲ್ಲಿ ಸೆವಿಲ್ಲಾ ತಂಡದ ವಿರುದ್ಧ 90 ನಿಮಿಷದ ಬಳಿಕ ಗೋಲು ಬಾರಿಸಿದ್ದರು. ಆಗ ಮಾಡ್ರಿಡ್ ವಿನ್ನರ್ ಆಗಿ ಹೊರಹೊಮ್ಮಿತ್ತು.
‘‘ನಮ್ಮ ಪ್ರಯತ್ನಕ್ಕೆ ಫಲ ಲಭಿಸಿದೆ. ನಾವು ಪಂದ್ಯದಲ್ಲಿ ವ್ಯತ್ಯಾಸ ಉಂಟು ಮಾಡಲು ಯಶಸ್ವಿಯಾಗಿದ್ದೇವೆ. ಈ ಗೆಲುವಿನಿಂದ ನಾವು ಸಂಭ್ರಮಪಡಲಾರೆವು. ನಮಗೆ ಇನ್ನಷ್ಟು ದೂರ ಕ್ರಮಿಸಬೇಕಾಗಿದೆ’’ ಎಂದು ರಾಮೊಸ್ ತಿಳಿಸಿದ್ದಾರೆ.