ಅನ್ಯೋನ್ಯತೆಯ ಸಹಬಾಳ್ವೆ ಅತ್ಯಗತ್ಯ: ಬಿಷಪ್ ಡಾ.ಅಲೋಶಿಯಸ್

Update: 2016-12-04 18:14 GMT

ಬಂಟ್ವಾಳ, ಡಿ.4: ಜಾತಿ, ಧರ್ಮ ಯಾವುದಾದರೇನು. ಅನ್ಯೋನ್ಯತೆಯಿಂದ ಸಹಬಾಳ್ವೆ ನಡೆಸುವುದು ಪ್ರಸಕ್ತ ದಿನಗಳಲ್ಲಿ ಅತ್ಯಗತ್ಯವಾಗಿದ್ದು, ಇದಕ್ಕೆ ಸರ್ವ ಧರ್ಮಿಯರ ಸಹಕಾರ ಅತ್ಯಗತ್ಯವಾಗಿದೆ ಎಂದು ಮಂಗಳೂರು ಕ್ರೈಸ್ತ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಹೇಳಿದರು. ಗುರುದೀಕ್ಷೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಬಂಟ್ವಾಳ ಸಮೀಪದ ಅಗ್ರಾರ್‌ದ ದಿ ಮೋಸ್ಟ್ ಹೋಲಿ ಕ್ಷೇವಿಯರ್ ಚರ್ಚ್ ಆವರಣದಲ್ಲಿ ರವಿವಾರ ನಡೆದ ಹುಟ್ಟೂರ ಗೌರವಾರ್ಪಣೆ ಸ್ವೀಕರಿಸಿ ಅವರು ಸಂದೇಶ ನೀಡಿದರು. ಹುಟ್ಟೂರ ಸನ್ಮಾನ ನನಗೆ ಅವಿಸ್ಮರಣೀಯ. ಈ ಸನ್ಮಾನವನ್ನು ದೇವರಿಗೆ ಸಮರ್ಪಿಸುವೆ. ದೇವರ ಕೃಪೆ, ಅನುಗ್ರಹದಿಂದ ನನಗೆ ಜನರ ಸೇವೆ ಮಾಡುವ ಪುಣ್ಯಾವಕಾಶ ದೊರಕಿದೆ ಎಂದ ಅವರು, ಸರ್ವಧರ್ಮೀಯರು ಇಲ್ಲಿ ಭಾಗಿಗಳಾಗಿರುವುದು ಅತೀವ ಸಂತಸ ತಂದಿದೆ. ಇದೇ ಮಾದರಿಯಲ್ಲಿ ಎಲ್ಲರೂ ಪ್ರೀತಿ, ವಿಶ್ವಾಸ, ಸಾಮರಸ್ಯದಿಂದ ಬಾಳುವಂತಾಗಬೇಕು ಎಂದು ಕರೆ ನೀಡಿದರು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅಭಿನಂದನಾ ಭಾಷಣಗೈದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಿಷಪ್‌ರ ಒಡನಾಟವನ್ನು ಸ್ಮರಿಸಿದರು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಜೆ.ಆರ್.ಲೋಬೊ, ಬಳ್ಳಾರಿ ಬಿಷಪ್ ಡಾ.ಹೆನ್ರಿ ಡಿಸೋಜ, ಮಂಗಳೂರು ಧರ್ಮಪ್ರಾಂತದ ವಿಭಾಗೀಯ ಮುಖ್ಯಸ್ಥೆ ವೆರಿ ರೆವರೆಂಡ್ ಸಿ.ಝೀನಾ, ಕರ್ನಾಟಕ ಕೊಂಕಣಿ ಅಕಾಡಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಬ್ಲೋಸಂ ಆಸ್ಕರ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಕೆಥೊಲಿಕ್ ಧರ್ಮಾಧ್ಯಕ್ಷರ ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಬಂಟ್ವಾಳ ವಲಯ ಪ್ರ.ಸಂಚಾಲಕ ಪಿಯೂಸ್. ಎಲ್.ರೊಡ್ರಿಗಸ್ ಸ್ವಾಗತಿಸಿದರು. ಬಂಟ್ವಾಳ ವಲಯ ಪ್ರ.ಧರ್ಮಗುರು ಮ್ಯಾಕ್ಸಿಂ ಎಲ್. ನೊರೊನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಗ್ರಾರ್ ಚರ್ಚ್ ಧರ್ಮಗುರು ರೆ.ಪಾ.ಗ್ರೆಗೊರಿ ಡಿಸೋಜ ಸನ್ಮಾನಪತ್ರ ವಾಚಿಸಿದರು.

ಬಂಟ್ವಾಳ ವಲಯ ಕಾರ್ಯದರ್ಶಿ ವಿಕ್ಟರ್ ಮಿನೇಜಸ್ ವಂದಿಸಿದರು. ಬಿ.ರಾಮಚಂದ್ರ ರಾವ್ ಹಾಗೂ ಜೀಟಾ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ನೂರಾರು ಧರ್ಮಗುರುಗಳು, ಮೂವರು ಬಿಷಪರು, ಸಾವಿರಾರು ಭಕ್ತರೊಂದಿಗೆ ದಿವ್ಯ ಬಲಿಪೂಜೆ ನೆರವೇರಿತು. ಈ ಸಂದರ್ಭ ಅಜ್ಮೀರ್ ಧರ್ಮಪ್ರಾಂತದ ಬಿಷಪ್ ಅ.ವಂ.ಡಾ.ಪಿಯುಸ್ ಥೋಮಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News