×
Ad

ಸ್ಥಾನಕ್ಕೆ ತಕ್ಕುದಲ್ಲದ ಹೇಳಿಕೆ : ನಿಯೋಜಿತ ಅಧ್ಯಕ್ಷ ಟ್ರಂಪ್ ಗೆ ತಿರುಗೇಟು ನೀಡಿದ ಮಹಿಳೆ

Update: 2016-12-05 12:36 IST

ವಾಷಿಂಗ್ಟನ್, ಡಿ.5 : ಅಮೆರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸ್ಟಾಟರ್ಡ್ ಡೇ ನೈಟ್ ಲೈವ್ ಕಾರ್ಯಕ್ರಮದ ಲೇಟೆಸ್ಟ್ ಮಾಲಿಕೆಯನ್ನು ಟೀಕಿಸಿ ಅದನ್ನು ``ವೀಕ್ಷಿಸಲು ಅಸಾಧ್ಯ' ಎಂದಿದ್ದಾರೆ. ಟ್ರಂಪ್ ಪ್ರತಿ ವಾರ ಸಮಯ ಮಾಡಿಕೊಂಡು ಈ ಕಾರ್ಯಕ್ರಮ  ವೀಕ್ಷಿಸಿ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರವಾಗಿದೆ.

ಡಿಸೆಂಬರ್  4ರಂದು ರಾತ್ರಿ ಕಾರ್ಯಕ್ರಮ ವೀಕ್ಷಿಸಿ  ಟ್ರಂಪ್ ಟ್ವೀಟೊಂದನ್ನು ಹೀಗೆ ಮಾಡಿದ್ದರು ``ಈಗಷ್ಟೇ  ಸ್ಯಾಟರ್ಡೇ ನೈಟ್ ಲೈವ್ ವೀಕ್ಷಿಸಿದೆ. ಅದು ಸಂಪೂರ್ಣವಾಗಿ ತಾರತಮ್ಯದಿಂದ ಕೂಡಿದ್ದು ಇದಕ್ಕಿಂತೂ   ಕೆಟ್ಟದಾಗಲು ಸಾಧ್ಯವಿಲ್ಲ.''

ಆದರೆ  ಇದನ್ನು ಓದಿದ ಮಹಿಳೆಯೊಬ್ಬಳು ಅದಕ್ಕೆ ಪ್ರತಿಕ್ರಿಯಿಸಿ ಟ್ರಂಪ್ ಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.  ತನ್ನನ್ನು ನಾಸ್ತಿಕಳೆಂದು ಬಣ್ಣಿಸುವ ಡೇನಿಯಲ್ ಮಸ್ಕಾತೊ ಎಂಬ ಮಹಿಳೆ ಕೂಡಲೇ ಟ್ರಂಪ್ ಅವರನ್ನು ಉದ್ದೇಶಿಸಿ ಹಲವಾರು ಟ್ವೀಟ್ ಗಳನ್ನು ಮಾಡಿದ್ದಾರೆ. ಆಕೆ ತನ್ನನ್ನು ನಾಗರಿಕ ಹಕ್ಕು ಕಾರ್ಯಕರ್ತೆ, ಸಂಗೀತ ತಜ್ಞೆ ಹಾಗೂ ತೃತೀಯ ಲಿಂಗಿ ಎಂದು ಹೇಳಿಕೊಂಡಿದ್ದಾಳೆೆ.

ನಿಯೋಜಿತ ಅಧ್ಯಕ್ಷರೊಬ್ಬರು ಇಂತಹ ಸಣ್ಣ ವಿಷಯಗಳಲ್ಲಿ ಕಾಲಹರಣ ಮಾಡುವ ಬದಲು ಅಮೆರಿಕನ್ನರಿಗೆ ಉಪಯೋಗವಾಗುವ ಕಾರ್ಯಗಳಲ್ಲಿ ತೊಡಗಬೇಕೆಂದು ಟ್ವೀಟ್ ಮಾಡಿದ್ದಾಳೆ. ``ನೀವು ನಿಯೋಜಿತ ಅಧ್ಯಕ್ಷರು.  ನಿಮ್ಮ ಕಾರ್ಯ ನೋಡಿಕೊಳ್ಳಿ, ನೀವು ನಿಮ್ಮನ್ನೇ ಮುಜುಗರಪಡಿಸುತ್ತಿದ್ದೀರಿ'' ಎಂದು ಆಕೆ ಹೇಳಿದ್ದಾಳೆ.

ಮಹಿಳೆಯ ಮೊದಲ ಟ್ವೀಟನ್ನು 30,000 ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದರು. ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಆಕೆ  ಸುಮಾರು 30 ಟ್ವೀಟುಗಳನ್ನು ಮಾಡಿದ್ದಾಳೆ.

`ಡೊನಾಲ್ಡ್ ಟ್ರಂಪ್ ಇದೊಂದು ಜೋಕ್ ಅಲ್ಲ, ನಿಮಗೆ ಬೇರೇನಾದರೂ ಮಾಡಲು ಕೆಲಸವಿಲ್ಲವೇ ? ಚುನಾವಣಾ ದಿನದ ನಂತರ ಎಷ್ಟು ಮಂದಿ ತೃತೀಯ ಲಿಂಗಿಗಳು ಕೊಲೆಯಾಗಿದ್ದಾರೆಂದು ನಿಮಗೆ ತಿಳಿದಿದೆಯೇ, ನಿಮಗೆ ನೀವೇನು ಮಾಡುತ್ತಿದ್ದೀರೆಂದು ತಿಳಿದಿಲ್ಲ'' ಎಂಬಿತ್ಯಾದಿ ವಿಚಾರಗಳನ್ನೆತ್ತಿಕೊಂಡು ಆಕೆ  ಟ್ವೀಟ್ ಮಾಡಿದ್ದಾಳೆ.

ಆಕೆಯ ಈ ಟ್ರಂಪ್ ವಿರೋಧಿ ಟ್ವೀಟ್ ಅಭಿಯಾನ ಆಕೆಗೆ 50,000 ಹೊಸ ಫಾಲೋವರ್ಸ್ ಸೃಷ್ಟಿಸಿದ್ದು ಆಕೆ ಎಲ್ಲರಿಗೂ ಧನ್ಯವಾದ ಹೇಳಿ ಈ ವೇದಿಕೆಯನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸೋಣ ಎಂದು ಬರೆದಿದ್ದಾಳೆ.

ಒಟ್ಟಾರೆಯಾಗಿ ಆಕೆಯ ಟ್ವೀಟುಗಳು 2 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಕೆಲವರಿಗೆ ಆಕೆಯ ಟ್ವೀಟುಗಳು ಇಷ್ಟವಾಗದೇ ಹೋದರೂ ಅಂತಿಮವಾಗಿ ಆಕೆ ಎಲ್ಲಾ ಅಮೆರಿಕನ್ನರು ಜನಾಂಗೀಯತೆ ಮತ್ತು ಧರ್ಮಾಂಧತೆಯ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದ್ದಾಳೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News