×
Ad

ಮನೆಯಲ್ಲಿ ಕಳ್ಳತನ ಮಾಡಿ ಶಿಕ್ಷಕಿ ಜೊತೆ ಬಾಲಕ ಪರಾರಿ

Update: 2016-12-05 15:38 IST

ಬರೇಲಿ,ಡಿ.5: 14ರ ಹರೆಯದ ಬಾಲಕನೋರ್ವ ಮನೆಯಿಂದ 8,000 ರೂ.ನಗದು ಮತ್ತು ಚಿನ್ನಾಭರಣಗಳನ್ನು ಕದ್ದುಕೊಂಡು ತನ್ನ ಶಾಲೆಯ 22ರ ಹರೆಯದ ಶಿಕ್ಷಕಿಯೊಡನೆ ಪರಾರಿಯಾಗಿದ್ದಾನೆ. ಶಿಕ್ಷಕಿ ಶಾಲೆಯ ಮಾಲಕನ ಮಗಳಾಗಿದ್ದಾಳೆ.

ಡಿ.1ರ ರಾತ್ರಿ ಬಾಲಕ ಪರಾರಿಯಾಗಿದ್ದು, ಆತ ಕಾಣೆಯಾಗಿರುವ ವಿಷಯ ಮನೆಯವರಿಗೆ ಮರುದಿನ ಬೆಳಿಗ್ಗೆಯಷ್ಟೇ ಗೊತ್ತಾಗಿತ್ತು. ತನ್ಮಧ್ಯೆ ಯುವತಿಯ ಮನೆಯವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಯುವತಿಯ ಪ್ರಚೋದನೆಯ ಮೇರೆಗೆ ತನ್ನ ಮಗ ಈ ಕೃತ್ಯವೆಸಗಿದ್ದಾನೆ. ಆಕೆಯ ನಡತೆ ಚೆನ್ನಾಗಿಲ್ಲ. ನಗನಾಣ್ಯಗಳ ಕಳ್ಳತನ ಮಾಡುವಂತೆ ಮತ್ತು ತನ್ನೊಂದಿಗೆ ಪರಾರಿ ಯಾಗುವಂತೆ ಆಕೆ ತನ್ನ ಮಗನಿಗೆ ಪುಸಲಾಯಿಸಿದ್ದಾಳೆ ಎಂದು ಇಲ್ಲಿಯ ಫರೀದ್‌ಪುರದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿರುವ ಬಾಲಕನ ತಂದೆ ರಣವೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಬಾಲಕನ ಕುಟುಂಬವೇ ಈ ಪರಾರಿ ಯೋಜನೆಯನ್ನು ರೂಪಿಸಿದೆ. ತನ್ನ ಶಾಲೆಯಲ್ಲಿ ಕಲಿಸುತ್ತಿದ್ದ ಬಾಲಕನ ಕುಟುಂಬದ ಓರ್ವರನ್ನು ತಾನು ಕೆಲಸದಿಂದ ತೆಗೆದುಹಾಕಿದ್ದೆ. ಪ್ರತೀಕಾರ ತೀರಿಸಿಕೊಳ್ಳಲು ಆ ಕುಟುಂಬ ಈ ಸಂಚನ್ನು ನಡೆಸಿದೆ ಎಂದು ಯವತಿಯ ತಂದೆ ತಿಳಿಸಿದ್ದಾರೆ.

ಇದೊಂದು ವಿಲಕ್ಷಣ ಪ್ರಕರಣ. ತನ್ನ ಕುಟುಂಬದ ಸೂಚನೆಯ ಮೇರೆಗೆ ಬಾಲಕ ಯುವತಿಯನ್ನು ಅಪಹರಿಸಿದ್ದಾನೆ ಎಂದು ಆಕೆಯ ಕುಟುಂಬದವರು ದೂರಿದ್ದಾರೆ. ನಾವು ಬಾಲಕನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದರೆ ಮೇಲ್ನೋಟಕ್ಕೆ ಇದು ಹಾಗೆ ಕಂಡುಬರುತ್ತಿಲ್ಲ. ಬಹುಶಃ ಅವರಿಬ್ಬರೂ ಪರಸ್ಪರ ಪ್ರೇಮಿಸುತ್ತಿರಬೇಕು ಮತ್ತು ತಮ್ಮ ಕುಟುಂಬಗಳನ್ನು ಎದುರಿಸಲಾಗದೆ ಪರಾರಿಯಾಗಿರುವಂತಿದೆ. ಸದ್ಯಕ್ಕೆ ನಾವು ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಎಸ್‌ಪಿ ಯಮುನಾ ಪ್ರಸಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News