×
Ad

ಅನಾರೋಗ್ಯದ ನಡುವೆಯೂ ಸಮಸ್ಯೆಗೆ ಅಮ್ಮನಂತೆ ಸ್ಪಂದಿಸಿದ ಸುಷ್ಮಾ

Update: 2016-12-05 16:24 IST

ಹೊಸದಿಲ್ಲಿ,ಡಿ.5: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಅನಾರೋಗ್ಯದಿಂದಾಗಿ ಇಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿ ದ್ದಾರಾದರೂ ಜನರ ಸಂಕಷ್ಟಗಳಿಗೆ ನೆರವನ್ನು ಮಂದುವರಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ತಕ್ಷಣದ ಸ್ಪಂದನಕ್ಕಾಗಿ ಹೆಸರಾಗಿರುವ ಅವರು ವೀಸಾ ತೊಂದರೆಗಳನ್ನು ಎದುರಿಸುತ್ತಿರುವ ಭಾರತೀಯ ವಿದ್ಯಾರ್ಥಿನಿಯೋರ್ವಳ ಅಳಲಿಗೆ ಆಸ್ಪತ್ರೆಯಿಂದಲೇ ಸ್ಪಂದಿಸಿದ್ದಾರೆ.

ಆಸ್ಟ್ರೇಲಿಯಾಕ್ಕೆ ತೆರಳಲು ಸಕಾಲದಲ್ಲಿ ವೀಸಾ ಕೈ ಸೇರದ್ದರಿಂದ ಪಿಎಚ್‌ಡಿ ವಿದ್ಯಾರ್ಥಿನಿ ಗೀತಾ ಸಿಂಗ್ ಟ್ವಿಟರ್ ಮೂಲಕ ಸಿಷ್ಮಾರ ನೆರವು ಕೋರಿದ್ದರು. ಏಮ್ಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿರುವ ಸಿಂಗ್ ನ.14ರಂದು ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ವೀಸಾ ಮಾತ್ರ ಕೈ ಸೇರಿರಲಿಲ್ಲ. ಡಿ.7ರಂದು ಆಸ್ಟ್ರೇಲಿಯಾದಲ್ಲಿ ಪ್ರಬಂಧವೊಂದನ್ನು ಮಂಡಿಸಬೇಕಾಗಿದೆ.ಹೀಗಾಗಿ ವೀಸಾದ ತುರ್ತು ಅಗತ್ಯವಿದೆ ಎಂದು ಆಕೆ ಸುಷ್ಮಾರಲ್ಲಿ ಗೋಳು ತೋಡಿಕೊಂಡಿದ್ದರು.

ಸುಷ್ಮಾ ವಿದ್ಯಾರ್ಥಿನಿಯ ಅಳಲಿಗೆ ಎಷ್ಟೊಂದು ವೇಗವಾಗಿ ಸ್ಪಂದಿಸಿದ್ದರೆಂದರೆ ಒಂದೇ ದಿನದಲ್ಲಿ...ಅಂದರೆ ಇಂದು ವೀಸಾ ಆಕೆಯ ಕೈ ಸೇರಿದೆ.

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮಲಗಿದ್ದರೂ ವಿದ್ಯಾರ್ಥಿನಿಗೆ ನೆರವಾಗಿದ್ದಕ್ಕೆ ನೆಟಿಝನ್‌ಗಳು ಸುಷ್ಮಾರ ಬಗ್ಗೆ ಪ್ರಶಂಸೆಗಳ ಮಹಾಪೂರವನ್ನೇ ಹರಿಸಿದ್ದಾರೆ.

 ‘ಮನೆಯಿಂದಲೇ ಕೆಲಸ ಮಾಡಿ ’ಎನ್ನುವುದು ನಮಗೆ ಗೊತ್ತು. ಆದರೆ ನೀವು ಆಸ್ಪತ್ರೆಯಿಂದ ಕೆಲಸ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದೀರಿ. ನಿಮ್ಮ ನಿಸ್ವಾರ್ಥ ಸೇವೆಗಾಗಿ ಧನ್ಯವಾದಗಳು:ಇದು ಅಂತಹ ಒಂದು ಟ್ವೀಟ್‌ನ ಸ್ಯಾಂಪಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News