ಪತ್ನಿ ಸೂಚನೆಯಂತೆ ನ್ಯೂಝಿಲ್ಯಾಂಡ್ ಪ್ರಧಾನಿ ರಾಜೀನಾಮೆ!
Update: 2016-12-05 20:42 IST
ವೆಲಿಂಗ್ಟನ್, ಡಿ. 5: ಎಂಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ನ್ಯೂಝಿಲ್ಯಾಂಡ್ ಪ್ರಧಾನಿ ಜಾನ್ ಕೀ ಸೋಮವಾರ ತನ್ನ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ತನ್ನ ರಾಜೀನಾಮೆಗೆ ಕೌಟುಂಬಿಕ ಕಾರಣಗಳನ್ನು ನೀಡಿದ್ದಾರೆ.
‘‘ಇದು ಈವರೆಗೆ ನಾನು ತೆಗೆದುಕೊಂಡ ನಿರ್ಧಾರಗಳಲ್ಲೇ ಅತ್ಯಂತ ಕಠಿಣ. ಮುಂದೆ ನಾನು ಏನು ಮಾಡುತ್ತೇನೆ ಎಂದು ತಿಳಿದಿಲ್ಲ’’ ಎಂದು ಕೀ ಹೇಳಿರುವುದಾಗಿ ‘ಎಫೆ’ ವರದಿ ಮಾಡಿದೆ. ನ್ಯಾಶನಲ್ ಪಾರ್ಟಿಯ ನಾಯಕರಾಗಿಯೂ ಅವರು ರಾಜೀನಾಮೆ ನೀಡಿದ್ದಾರೆ.
ತನ್ನ ಹೆಂಡತಿ ಬ್ರೊನಾಫ್ ಸೂಚನೆ ಮೇರೆಗೆ ಪ್ರಧಾನಿ ಕೀ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅವರ ಇಬ್ಬರು ಮಕ್ಕಳ ಬದುಕಿನ ಮೇಲೆ ಆಗುತ್ತಿರುವ ‘ಅಸಾಧಾರಣ ಪ್ರಮಾಣದ ದಾಳಿ’ಯನ್ನು ಪರಿಗಣಿಸಿ ಬ್ರೊನಾಫ್ ತನ್ನ ಗಂಡನಿಗೆ ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಧಾನಿಯ ರಾಜೀನಾಮೆ ನಿರ್ಧಾರದಿಂದ ಅವರ ಪಕ್ಷದ ಸಂಸದರು ಮತ್ತು ಜನರು ಆಘಾತಕ್ಕೊಳಗಾಗಿದ್ದಾರೆ.