ಚೀನಾದ ನೀತಿಗಳ ವಿರುದ್ಧ ಕೆಂಡ ಕಾರಿದ ಟ್ರಂಪ್

Update: 2016-12-05 16:06 GMT

ವಾಶಿಂಗ್ಟನ್, ಡಿ. 5: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಆರ್ಥಿಕ ಮತ್ತು ಸೇನಾ ನೀತಿಗಳ ಬಗ್ಗೆ ರವಿವಾರ ಟ್ವಿಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೈವಾನ್ ಅಧ್ಯಕ್ಷೆಯ ಜೊತೆಗೆ ಫೋನ್‌ನಲ್ಲಿ ಮಾತನಾಡಿರುವುದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕವೂ, ಚೀನಾ ಜೊತೆಗಿನ ತನ್ನ ಬಿಗಿ ನಿಲುವಿನಲ್ಲಿ ಟ್ರಂಪ್ ಯಾವುದೇ ರಿಯಾಯಿತಿ ತೋರಿಸಿಲ್ಲ ಎನ್ನುವುದನ್ನು ಇದು ತೋರಿಸಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್ ವೆನ್ ಜೊತೆ ಟ್ರಂಪ್ ಶುಕ್ರವಾರ ಫೋನ್ ಮೂಲಕ ನಡೆಸಿದ ಮಾತುಕತೆಗೆ ಚೀನಾ ಶನಿವಾರ ಅಮೆರಿಕಕ್ಕೆ ಪ್ರತಿಭಟನೆ ಸಲ್ಲಿಸಿತ್ತು.

ಅದೊಂದು ಸೌಜನ್ಯದ ಕರೆಯಾಗಿತ್ತು ಹಾಗೂ ಚೀನಾ ಕುರಿತ ಅಮೆರಿಕದ ನೀತಿಯಲ್ಲಿನ ಬದಲಾವಣೆಯನ್ನು ಅದು ತೋರಿಸುವುದಿಲ್ಲ ಎಂಬುದಾಗಿ ನಿಯೋಜಿತ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದರು.

ಚೀನಾ ಕರೆನ್ಸಿಯಲ್ಲಿ ಹಸ್ತಕ್ಷೇಪ ನಡೆಸುವ ದೇಶ ಎಂಬುದಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಹೇಳಿದ್ದರು. ಅದೇ ರೀತಿಯ ಮಾತುಗಳನ್ನು ಅವರು ರವಿವಾರವೂ ಮುಂದುವರಿಸಿದ್ದಾರೆ.

‘‘ತನ್ನ ಕರೆನ್ಸಿಯನ್ನು ಅಪವೌಲ್ಯಗೊಳಿಸುವಾಗ ಚೀನಾ ನಮ್ಮನ್ನು ಕೇಳಿತ್ತೆ? (ಅದರಿಂದಾಗಿ ನಮ್ಮ ಕಂಪೆನಿಗಳಿಗೆ ಚೀನಾದ ಕಂಪೆನಿಗಳ ಜೊತೆಗೆ ಸ್ಪರ್ಧಿಸಲಾಗಲಿಲ್ಲ), ನಮ್ಮ ದೇಶದಿಂದ ಚೀನಾಕ್ಕೆ ಹೋಗುವ ಉತ್ಪನ್ನಗಳಿಗೆ ಭಾರೀ ತೆರಿಗೆ ವಿಧಿಸುವುದಾಗಿ ನಮ್ಮನ್ನು ಕೇಳಿತ್ತೆ? (ಅಮೆರಿಕವು ಚೀನಾ ಉತ್ಪನ್ನಗಳಿಗೆ ತೆರಿಗೆ ವಿಧಿಸುವುದಿಲ್ಲ), ಹಾಗೂ ದಕ್ಷಿಣ ಚೀನಾ ಸಮುದ್ರದ ಮಧ್ಯದಲ್ಲಿ ಬೃಹತ್ ಸೇನಾ ನೆಲೆಯನ್ನು ನಿರ್ಮಿಸುತ್ತೇನೆ ಎಂಬುದಾಗಿ ಅದು ಅಮೆರಿಕವನ್ನು ಕೇಳಿತ್ತೇ? ನನಗೆ ಹಾಗೆ ಅನಿಸುವುದಿಲ್ಲ!’’ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.


ಹೇಗೆ ಪ್ರತಿಕ್ರಿಯಿಸುವುದು ಎಂಬ ಗೊಂದಲದಲ್ಲಿ ಚೀನಾ!


ಬೀಜಿಂಗ್, ಡಿ. 5: ಸೂಕ್ಷ್ಮ ವಿಷಯಗಳ ಬಗ್ಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್‌ನಲ್ಲಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಗೊಂದಲಕ್ಕೊಳಗಾಗಿರುವ ಚೀನಾ, ಯಾವ ರೀತಿಯಲ್ಲಿ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಎಂಬ ಸಂಧಿಗ್ಧತೆಗೆ ಒಳಗಾಗಿದೆ.
ತನ್ನ ವಿರುದ್ಧ ಆಕ್ರಮಣಕಾರಿ ಮತ್ತು ಸಂಘರ್ಷಯುತ ನಿಲುವನ್ನು ತಳೆದಿರುವ ಅಮೆರಿಕದ ನಿಯೋಜಿತ ಅಧ್ಯಕ್ಷರ ಬಗ್ಗೆ ಅದು ನಿರ್ಧಾರವೊಂದನ್ನು ಇನ್ನಷ್ಟೇ ತೆಗೆದುಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News