ವಾಂಖೆಡೆ ಸ್ಟೇಡಿಯಂ ಇಂಗ್ಲೆಂಡ್ ಕ್ರಿಕೆಟ್ ತಂಡದ ಅದೃಷ್ಟದ ಮೈದಾನ

Update: 2016-12-05 17:59 GMT

ಮುಂಬೈ, ಡಿ.5: ಅಲಿಸ್ಟರ್ ಕುಕ್ ನಾಯಕತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡ ಡಿ.8 ರಿಂದ ಮುಂಬೈನಲ್ಲಿ ನಾಲ್ಕನೆ ಟೆಸ್ಟ್ ಪಂದ್ಯವನ್ನು ಆಡಲಿದೆ. ಮುಂಬೈನ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂ ಇಂಗ್ಲೆಂಡ್‌ನ ಲಕ್ಕಿ ಗ್ರೌಂಡ್ ಆಗಿ ಗುರುತಿಸಿಕೊಂಡಿದೆ.

ಕುಕ್ ಎರಡು ಬಾರಿ ಈ ಮೈದಾನದಲ್ಲಿ ಆಡಿ ಗೆಲುವು ಸಾಧಿಸಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಸಾಧನೆ

*1980-ಗೋಲ್ಡನ್ ಜುಬಿಲಿ ಟೆಸ್ಟ್, ಇಂಗ್ಲೆಂಡ್‌ಗೆ 10 ವಿಕೆಟ್ ಜಯ

1980ರಲ್ಲಿ ನಡೆದ ಗೋಲ್ಡನ್ ಜುಬಿಲಿ ಟೆಸ್ಟ್‌ನಲ್ಲಿ ಇಯಾನ್ ಬೋಥಮ್ ‘ವನ್ ಮ್ಯಾನ್ ಶೋ’ ಮೂಲಕ ಇಂಗ್ಲೆಂಡ್‌ಗೆ ಭರ್ಜರಿ ಜಯ ತಂದಿದ್ದರು. ಪಂದ್ಯದಲ್ಲಿ ಒಟ್ಟು 13 ವಿಕೆಟ್‌ಗಳನ್ನು ಉಡಾಯಿಸಿದ್ದ ಬೋಥಂ ಶತಕವನ್ನು ಬಾರಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದ ಬೋಥಂ ಭಾರತವನ್ನು 242 ರನ್‌ಗೆ ನಿಯಂತ್ರಿಸಿದ್ದರು. ಇಂಗ್ಲೆಂಡ್ 58 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 17 ಬೌಂಡರಿಗಳ ಸಹಿತ 113 ರನ್ ಬಾರಿಸಿದ ಬೋಥಂ ಇಂಗ್ಲೆಂಡ್ 296 ರನ್ ಗಳಿಸಲು ನೆರವಾಗಿದ್ದರು. ಭಾರತದ ಎರಡನೆ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ ಬೋಥಂ 149 ರನ್‌ಗೆ ಆಲೌಟ್ ಮಾಡಿದರು. ಗೆಲ್ಲಲು 96 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ ಸುಲಭವಾಗಿ ಜಯ ಸಾಧಿಸಿತು.

1987ರ ವಿಶ್ವಕಪ್ ಸೆಮಿ ಫೈನಲ್: 35 ರನ್ ಜಯ

ಮುಂಬೈನಲ್ಲಿ ನಡೆದ 1987ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ಕಪಿಲ್‌ದೇವ್ ಇಂಗ್ಲೆಂಡ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. 19 ಓವರ್‌ಗಳಲ್ಲಿ 117ರನ್ ಜೊತೆಯಾಟ ನಡೆಸಿದ ಗ್ರಹಾಂ ಗೂಚ್ ಹಾಗೂ ಮೈಕ್ ಗ್ಯಾಟಿಂಗ್ ಇಂಗ್ಲೆಂಡ್ ತಂಡ 254 ರನ್ ಗಳಿಸಲು ನೆರವಾಗಿದ್ದರು. ದಿಲಿಪ್ ವೆಂಗ್‌ಸರ್ಕಾರ್ ಅಸೌಖ್ಯದ ಕಾರಣ ಬ್ಯಾಟಿಂಗ್ ಮಾಡಲಿಲ್ಲ. ಆಕ್ರಮಣಕಾರಿ ಆಟಗಾರರಾಗಿದ್ದ ಕ್ರಿಸ್ ಶ್ರೀಕಾಂತ್ ಹಾಗೂ ನವಜೋತ್ ಸಿಂಗ್ ಸಿಧು ಬೌಂಡರಿ ಬಾರಿಸಲು ಪರದಾಟ ನಡೆಸಿದ್ದರು. ಎಡ್ಡಿ ಹೆಮ್ಮಿಂಗ್ಸ್ 21 ರನ್‌ಗೆ 4 ವಿಕೆಟ್‌ಗಳನ್ನ್ನು ಉರುಳಿಸಿದರು. ಫೈನಲ್ ತಲುಪುವ ಆತಿಥೇಯ ಭಾರತದ ಕನಸನ್ನು ಭಗ್ನೊಳಿಸಿದ್ದರು.

2002ರ ಆರನೆ ಏಕದಿನ: 5 ರನ್ ಗೆಲುವು

2001-02ರಲ್ಲಿ ಟೆಸ್ಟ್ ಸರಣಿಯನ್ನು ಸೋತ ಬಳಿಕ ಕ್ರಿಸ್ಮಸ್ ಆಚರಣೆಗೆ ಸ್ವದೇಶಕ್ಕೆ ತೆರಳಿದ್ದ ಇಂಗ್ಲೆಂಡ್ ತಂಡ ಭಾರತ ವಿರುದ್ಧ ಆರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಭಾರತಕ್ಕೆ ವಾಪಸಾಗಿತ್ತು. ಎರಡನೆ ಏಕದಿನವನ್ನು ಜಯಿಸಿ ಸರಣಿಯನ್ನು ಸಮಬಲಗೊಳಿಸಿತ್ತು.

ಭಾರತ ಚೆನ್ನೈ ಹಾಗೂ ಕಾನ್ಪುರ ಏಕದಿನ ಪಂದ್ಯವನ್ನು ಜಯಿಸಿ ಮುನ್ನಡೆ ಸಾಧಿಸಿತ್ತು. ದಿಲ್ಲಿಯಲ್ಲಿ 20 ಓವರ್‌ಗಳಲ್ಲಿ 9 ರನ್‌ಗೆ 5 ವಿಕೆಟ್ ಕಬಳಿಸಿದ ಅಶ್ಲೆ ಗಿಲೆಸ್ ತಂಡಕ್ಕೆ 2 ರನ್‌ಗಳ ಗೆಲುವು ತಂದು ಕೊಟ್ಟು ಮರು ಹೋರಾಡಲು ನೆರವಾಗಿದ್ದರು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಹಗಲು-ರಾತ್ರಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 5 ರನ್‌ಗಳ ರೋಚಕ ಜಯ ಸಾಧಿಸಿತ್ತು.

ಗೆಲ್ಲಲು 255 ರನ್ ಪಡೆದಿದ್ದ ಭಾರತ ಒಂದು ಹಂತದಲ್ಲಿ ಸೌರವ್ ಗಂಗುಲಿ(80 ರನ್, 99 ಎಸೆತ) ಸಾಹಸದಿಂದ ಗೆಲುವಿನ ಹಾದಿಯಲ್ಲಿತ್ತು. ಸ್ಪಿನ್ನರ್ ಆಶ್ಲೆ ಗಿಲ್ಲೆಸ್ ಅವರು ಗಂಗುಲಿ ವಿಕೆಟ್ ಕಬಳಿಸಿ ಭಾರತದ ಗೆಲುವಿಗೆ ಅಡ್ಡಿಯಾಗಿದ್ದರು. ಒಂದು ಹಂತದಲ್ಲಿ 4 ವಿಕೆಟ್ ನಷ್ಟದಲ್ಲಿ 194 ರನ್ ಗಳಿಸಿದ್ದ ಭಾರತ 250 ರನ್‌ಗೆ ಆಲೌಟಾಗಿತ್ತು. ಮೂರು ವಿಕೆಟ್‌ಗಳನ್ನು ಉರುಳಿಸಿದ ಆ್ಯಂಡ್ರೂ ಫ್ಲಿಂಟಾಫ್ ಶರ್ಟ್ ತೆಗೆದು ಸಂಭ್ರಮಾಚರಣೆ ನಡೆಸಿದ್ದರು.

2006ರ ಮೂರನೆ ಟೆಸ್ಟ್-212 ರನ್ ಜಯ

ನಾಗ್ಪುರದಲ್ಲಿ ಡ್ರಾ ಸಾಧಿಸಿ ಮೊಹಾಲಿಯಲ್ಲಿ ಸೋತಿದ್ದ ಇಂಗ್ಲೆಂಡ್ ತಂಡ ಮುಂಬೈನಲ್ಲಿ ನಡೆದ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿತ್ತು. ಪಂದ್ಯದ ಅಂತಿಮದಿನದಾಟದಲ್ಲಿ 25 ರನ್‌ಗೆ 7 ವಿಕೆಟ್ ಕಳೆದುಕೊಂಡು ನಾಟಕೀಯ ಕುಸಿತ ಕಂಡ ಭಾರತ 212 ರನ್‌ಗಳಿಂದ ಸೋತಿತ್ತು. ಇಂಗ್ಲೆಂಡ್ ತಂಡ 21 ವರ್ಷಗಳ ಗೆಲುವಿನ ಬರವನ್ನು ನೀಗಿಸಿಕೊಂಡಿತ್ತು. 2012ರ ದ್ವಿತೀಯ ಟೆಸ್ಟ್-10 ವಿಕೆಟ್‌ಗಳ ಜಯ

2012ರಲ್ಲಿ ಭಾರತದಲ್ಲಿ ಇಂಗ್ಲೆಂಡ್‌ನ ಐತಿಹಾಸಿಕ ಸರಣಿ ಗೆಲುವಿನಲ್ಲಿ ಕುಕ್ ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚಿದ್ದರು. ಮುಂಬೈನಲ್ಲಿ ನಡೆದ ಎರಡನೆ ಟೆಸ್ಟ್‌ನಲ್ಲಿ ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಚೇತೇಶ್ವರ ಪೂಜಾರ ಸರಣಿಯಲ್ಲಿ ಬಾರಿಸಿದ 2ನೆ ಶತಕದ ನೆರವಿನಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 327 ರನ್ ಗಳಿಸಿತ್ತು.

122 ರನ್ ಗಳಿಸಿದ ಕುಕ್ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಭಾರತಕ್ಕೆ ತಕ್ಕ ಉತ್ತರ ನೀಡಲು ನೆರವಾದರು. ಕುಕ್‌ಗೆ ಉತ್ತಮ ಸಾಥ್ ನೀಡಿದ್ದ ಕೆವಿನ್ ಪೀಟರ್ಸನ್ 186 ರನ್ ಗಳಿಸಿದ್ದರು. ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳಾದ ಮಾಂಟಿ ಪನೇಸರ್ ಹಾಗೂ ಗ್ರೆಮ್ ಸ್ವಾನ್ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಸವಾಲಾದರು.

ಎರಡನೆ ಇನಿಂಗ್ಸ್‌ನಲ್ಲಿ 142 ರನ್‌ಗೆ ಆಲೌಟಾಗಿದ್ದ ಭಾರತದ ಪರ ಗೌತಮ್ ಗಂಭೀರ್(65) ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು. ಗೆಲ್ಲಲು 58 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ 10 ವಿಕೆಟ್‌ಗಳ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News