ಕರಾಚಿಯ ಹೊಟೇಲ್‌ನಲ್ಲಿ ಬೆಂಕಿ ದುರಂತ; ಪಾಕ್‌ನ ಇಬ್ಬರು ಕ್ರಿಕೆಟಿಗರಿಗೆ ಗಾಯ

Update: 2016-12-05 18:15 GMT

ಕರಾಚಿ, ಡಿ. 5: ಕರಾಚಿಯ ರೆಜೆಂಟ್ ಪ್ಲಾಝಾ ಹೊಟೇಲ್‌ನಲ್ಲಿ ಇಂದು ಸಂಭವಿಸಿದ ಬೆಂಕಿ ದುರಂತದಲ್ಲಿ ಗಾಯಗೊಂಡವರ ಪೈಕಿ ಪಾಕಿಸ್ತಾನದ ಇಬ್ಬರು ಪ್ರಥಮ ದರ್ಜೆ ಕ್ರಿಕೆಟಿಗರು ಸೇರಿದ್ದಾರೆ.
ಯುನೈಟೆಡ್ ಬ್ಯಾಂಕ್ ಲಿಮಿಟೆಡ್ (ಯುಬಿಎಲ್) ತಂಡದ ಆಲ್‌ರೌಂಡರ್ ಯಾಸೀಮ್ ಮುರ್ತಾಝಾ ಮತ್ತು ಲೆಗ್‌ಸ್ಪಿನ್ನರ್ ಕರಾಮತ್ ಅಲಿ ಅವರು ಬೆಂಕಿ ದುರಂತದ ವೇಳೆ ರಕ್ಷಿಸಿಕೊಳ್ಳುವ ಯತ್ನದಲ್ಲಿ ಗಾಯಗೊಂಡಿದ್ದಾರೆಂದು ಪಾಕಿಸ್ತಾನದ ಪತ್ರಿಕೆ ‘ದಿ ಡಾನ್’ ವರದಿ ಮಾಡಿದೆ.
ಯಾಸೀಮ್ ಮುರ್ತಾಝಾ ಬೆಂಕಿಯಿಂದ ರಕ್ಷಿಸಿಕೊಳ್ಳಲು ಎರಡನೆ ಮಹಡಿಯಿಂದ ಒಂದನೆ ಮಹಡಿಗೆ ಹಾರಿದಾಗ ಅವರ ಕಾಲಿಗೆ ಗಾಯವಾಗಿದೆ. ಕರಾಮತ್ ಅಲಿ ಅವರ ಕೈಗೆ ಗಾಯವಾಗಿದೆ.
 ಯುನೈಟೆಡ್ ಬ್ಯಾಂಕ್ ಲಿಮಿಟೆಡ್ ತಂಡ ಕರಾಚಿಯ ರೆಜೆಂಟ್ ಪ್ಲಾಝಾ ಹೊಟೇಲ್ ಕಟ್ಟಡದ ನಾಲ್ಕನೆ ಮಹಡಿಯಲ್ಲಿ ತಂಗಿತ್ತು. ಕ್ಯುಯೆಡ್ ಎ ಅಝಾಮ್ ಟ್ರೋಫಿಯ ಸೂಪರ್ ಎಂಟನೆ ಪಂದ್ಯದಲ್ಲಿ ಹಬೀಬ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ಆಡಲು ಯುನೈಟೆಡ್ ಬ್ಯಾಂಕ್ ಲಿಮಿಟೆಡ್ ತಂಡ ತಯಾರಿ ನಡೆಸಿತ್ತು. ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ 26 ಏಕದಿನ ಮತ್ತು 20 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದ ಶುಐಬ್ ಮಕ್ಸೂದ್ ಅವರು ಹೋಟೆಲ್‌ನಲ್ಲಿ ಬೆಂಕಿ ದುರಂತ ಸಂಭವಿಸಿದಾಗ ಹೋಟೆಲ್‌ನ ಕೊಠಡಿಯಲ್ಲಿದ್ದರು. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರು ಹೋಟೆಲ್‌ನಲ್ಲಿ ಸಿಲುಕಿಕೊಂಡವರನ್ನು ಪಾರು ಮಾಡುವಲ್ಲಿ ನೆರವಾಗಿದ್ದಾರೆ ಎಂದು ಯುಬಿಎಲ್ ಸ್ಪೋರ್ಟ್ಸ್ ಸಂಸ್ಥೆಯ ಮುಖ್ಯಸ್ಥ ನದೀಮ್ ಖಾನ್ ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹಬೀಬ್ ಬ್ಯಾಂಕ್ ಲಿಮಿಟೆಡ್ ಮತ್ತು ಯುನೈಟೆಡ್ ಬ್ಯಾಂಕ್ ಲಿಮಿಟೆಡ್ ತಂಡಗಳ ನಡುವಿನ ಪಂದ್ಯವನ್ನು ರದ್ದುಗೊಳಿಸಿ ಉಭಯ ತಂಡಗಳಿಗೂ ತಲಾ ಒಂದು ಅಂಕವನ್ನು ನೀಡಿದೆ.
,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News