ಮಂಗಗಳ ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸರಕಾರಕ್ಕೆ ಪ್ರಸ್ತಾವನೆ: ಸಚಿವ ಪ್ರಮೋದ್

Update: 2016-12-05 18:28 GMT

(ಉಡುಪಿ), ಡಿ.5: ಹಾವಂಜೆ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಮಂಗಗಳ ಕಾಟದಿಂದ ಕೃಷಿಕರು ಕೃಷಿಯನ್ನೇ ಕೈಬಿಡುವ ಪರಿಸ್ಥಿತಿ ಎದುರಾಗಿದೆ. ಮಂಗಗಳನ್ನು ನಿಯಂತ್ರಿಸಲು ಅವುಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ದಟ್ಟ ಕಾಡಿನೊಳಗೆ ಬಿಡಲು ಪೂರಕವಾದ ಪ್ರಸ್ತಾವನೆಯನ್ನು ತಕ್ಷಣ ಸಿದ್ಧಪಡಿಸುವಂತೆ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಾವಂಜೆಯ ಮಹಾಲಿಂಗೇಶ್ವರ ದೇವಸ್ಥಾನ ಆವರಣ ದಲ್ಲಿ ಹಾವಂಜೆ ಗ್ರಾಪಂ ವ್ಯಾಪ್ತಿಯಲ್ಲಿ ವನ್ಯ ಮೃಗಗಳ ಹಾವಳಿ ಕುರಿತು ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯೊಂದಿಗೆ ಸೋಮವಾರ ನಡೆಸಿದ ವಿಶೇಷ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಹಾವಂಜೆ ಪರಿಸರದಲ್ಲಿ ಕಾಡುಪ್ರಾಣಿಗಳ ಹಾವಳಿ ಕುರಿತು ತಮಗೆ ಹಲವು ದೂರುಗಳು ಬಂದಿವೆ. ಇತ್ತೀಚೆಗೆ ಮಹೇಶ್ ಎಂಬವರು ಬೈಕ್‌ನಲ್ಲಿ ಹೋಗುವಾಗ ಜಿಂಕೆಯು ಕೊಂಬಿನಿಂದ ತಿವಿದ ಪರಿಣಾಮ ಮೃತಪಟ್ಟಿದ್ದು, ಇಲಾಖೆ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದೆ ಎಂದರು.

ಮಂಗಗಳು ಸೇರಿದಂತೆ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಸಮಗ್ರವಾದ ಪ್ರಸ್ತಾವನೆ ಸಲ್ಲಿಸುವುದರಿಂದ ಮುಂದಿನ ಬಜೆಟ್‌ನಲ್ಲಿ ಪ್ರಸ್ತಾವನೆಗೆ ಅನುಮೋದನೆ ದೊರಕಿಸಬಹುದು ಎಂದು ಸಚಿವರು ಹೇಳಿದರು.
ಹಾವಂಜೆಯಲ್ಲಿ ದಾರಿ ಬದಿಯಲ್ಲಿ ಜನರಿಗೆ ತೊಂದರೆ ನೀಡುವ ಅಪಾಯಕಾರಿ ಮರಗಳನ್ನು ಹಾಗೂ ಅಕೇಶಿಯ ಮರಗಳನ್ನು ಕಡಿದು ದಾರಿಹೋಕರಿಗೆ ಅನುಕೂಲ ಮಾಡಿಕೊಡಬೇಕು. ಒಂದು ವಾರದೊಳಗಾಗಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅವರು ವಲಯ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಸಮಿತಿ ರಚನೆ: 
ಹಾವಂಜೆ ಗ್ರಾಪಂ ಮಟ್ಟದಲ್ಲಿ ಇತ್ತೀಚೆಗೆ ಕಾಡುಪ್ರಾಣಿ ಉಪಟಳದ ನಿಯಂತ್ರಣಕ್ಕೆ ಸಭೆಯೊಂದನ್ನು ಕರೆದು ವಲಯ ಅರಣ್ಯಾಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಮೂಲಕ ಮಂಗಗಳನ್ನು ಹಿಡಿಯುವ ತಂಡವೊಂದನ್ನು ಕರೆಸಿ ಅವುಗಳನ್ನು ಹಿಡಿಯಲು ನಿರ್ಧರಿಸಲಾಯಿತು. ಹೀಗೆ ಹಿಡಿದ ಮಂಗಗಳನ್ನು ಆಗುಂಬೆ ಅಥವಾ ಕುದುರೆಮುಖದ ದಟ್ಟ ಅರಣ್ಯದಲ್ಲಿ ಇಲಾಖೆಯ ಮೂಲಕ ಬಿಡಲು ನಿರ್ಧರಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ಭರಿಸಲು, ಗ್ರಾಪಂ ಸಹಕಾರದಿಂದ ಇಡೀ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಯಿತು ಎಂದು ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ತಿಳಿಸಿದರು.

ಊರಿನಲ್ಲಿರುವ ಕಾಡುಕೋಣ, ಜಿಂಕೆಗಳ ಉಪಟಳ ನಿವಾರಣೆಗೆ ಸೌರಬೇಲಿ ಅಳವಡಿಸುವಂತೆ ಕುಂದಾಪುರ ಡಿಎಫ್‌ಒ ಎಂ.ವಿ.ಅಮರನಾಥ್ ಸೂಚಿಸಿದರು. ಇದಕ್ಕೆ ಸರಕಾರದಿಂದ ಶೇ.50ರಷ್ಟು ಸಬ್ಸಿಡಿ ದೊರೆಯುತ್ತಿದೆ ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಡೀಮ್ಡ್ ಫಾರೆಸ್ಟ್ ಸಮಸ್ಯೆ: ಗ್ರಾಪಂ ವ್ಯಾಪ್ತಿಯಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ತೀವ್ರವಾಗಿದ್ದು, ಇದರಿಂದ ರಸ್ತೆ, ಗ್ರಂಥಾಲಯ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಸಾಧ್ಯವಾಗುತ್ತಿಲ್ಲ ಎಂದು ಜನರು ದೂರಿದರು. ಹಾವಂಜೆ ಗ್ರಾಪಂ ವ್ಯಾಪ್ತಿಯಲ್ಲಿ 250 ಎಕರೆ ಡೀಮ್ಡ್ ಫಾರೆಸ್ಟ್ ಪ್ರದೇಶವಿದ್ದು, ಈಗ ಹೊಸ ಸಮಿತಿಯ ಸಮೀಕ್ಷೆಯಂತೆ 200 ಎಕರೆ ಜಮೀನನ್ನು ಕೈಬಿಡಲಾಗುವುದು. ಕೇವಲ 50 ಎಕರೆ ಡೀಮ್ಢ್ ಫಾರೆಸ್ಟ್ ಪ್ರದೇಶ ಉಳಿಯಲಿದೆ. ಈ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ ಅಲ್ಲಿ ಅನುಮತಿ ಸಿಕ್ಕಬಳಿಕ ಅದು ಕಂದಾಯ ಇಲಾಖೆ ವಶಕ್ಕೆ ಬರಲಿದ್ದು, ಆಗ ಗ್ರಾಮದ ಬೇಡಿಕೆಗೆ ಲಭ್ಯವಾಗಲಿದೆ ಎಂದರು.

ಹಾವಂಜೆಯಲ್ಲಿ 2,000 ಮಂಗ, 100 ಜಿಂಕೆಗಳ ಹಾವಳಿ
  ಸಭೆಯಲ್ಲಿ ಮಾತನಾಡಿದ ಮಾಜಿ ಗ್ರಾಪಂ ಅಧ್ಯಕ್ಷ ಭಾಸ್ಕರ ಶೆಟ್ಟಿ, ಹಾವಂಜೆಯಲ್ಲಿ ಕಾಡುಪ್ರಾಣಿಗಳ ಉಪಟಳದಿಂದ ರೈತರು ಕೃಷಿಯನ್ನೇ ತೊರೆಯುತ್ತಿ ದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ 2,000ಕ್ಕೂ ಅಧಿಕ ಮಂಗಗಳಿವೆ. 100ಕ್ಕೂ ಅಧಿಕ ಜಿಂಕೆಗಳಿವೆ. 4-5 ಚಿರತೆ, ಕಾಡುಕೋಣಗಳಿವೆ. ಇವುಗಳೊಂದಿಗೆ ಕಾಡು ಹಂದಿಯ ಉಪಟಳವೂ ಇದೆ ಎಂದು ವಿವರಿಸಿದರು.
ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ರಮೇಶ್ ಶೆಟ್ಟಿ ಸೇರಿದಂತೆ ಅನೇಕ ಗ್ರಾಮಸ್ಥರು ಪೂರಕವಾಗಿ ಮಾತ ನಾಡಿ, ಕಾಡುಪ್ರಾಣಿಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಸಭೆಯ ಮುಂದಿರಿಸಿದರು.

ಜಿಪಂ ಸದಸ್ಯ ಜನಾರ್ದನ ತೋನ್ಸೆ, ಕುಂದಾಪುರ ಡಿಎಫ್‌ಒ ಅಮರನಾಥ್, ಎಸಿಎಫ್ ಸತೀಶ್ ಬಾಬಾ ರೈ, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿಗಳಾದ ರಾಜಗೋಪಾಲ್ ಶೆಟ್ಟಿ, ರವಿರಾಜ್ ಶೆಟ್ಟಿ, ಬ್ರಹ್ಮಾವರ ತಹಶೀಲ್ದಾರ್ ಪ್ರದೀಪ್ ಕುಡ್ವೇಕರ್, ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪಉಪಸ್ಥಿತರಿದ್ದರು. ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಪ್ರಶಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹಾವಂಜೆ ಗ್ರಾಪಂನಲ್ಲಿ 2,550 ಎಕರೆ ಭೂ ಪ್ರದೇಶವಿದ್ದು, ಇದರಲ್ಲಿ 1995ರಲ್ಲಿ 191 ಎಕರೆ ಪ್ರದೇಶವನ್ನು ಮೀಸಲು ಅರಣ್ಯವಾಗಿ ಘೋಷಿಸಲಾಗಿದೆ. ಇಲ್ಲಿನ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ಕಡಿಯಲು, ಮಂಗ, ಜಿಂಕೆ, ಚಿರತೆ, ಕಾಡುಕೋಣ, ಕಾಡುಹಂದಿಗಳ ಉಪಟಳ ತಡೆ ಯಲು, ಇಲ್ಲಿರುವ 60ಕ್ಕೂ ಅಧಿಕ ಅಕೇಶಿಯಾ ಗಿಡಗಳನ್ನು ತೆಗೆದು ಹಣ್ಣಿನ ಗಿಡಗಳನ್ನು ನೆಡುವಂತೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದಾರೆ. ಮಂಗ ಹಿಡಿಯುವ ತಂಡ ಈಗ ಚಾಂತಾರು ಗ್ರಾಪಂನಲ್ಲಿದ್ದು, ನಂತರ ಇಲ್ಲಿಗೆ ಬರಲಿದೆ.
-ಕ್ಲಿಫರ್ಡ್ ಲೋಬೊ, ವಲಯ ಅರಣ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News