ಕೋಟ್ಯಂತರ ಜನರ ‘ಅಮ್ಮನ’ ಕೊನೆ ಗಳಿಗೆಯಲ್ಲಿ ಒಬ್ಬನೇ ಒಬ್ಬ ಕುಟುಂಬ ಸದಸ್ಯರಿರಲಿಲ್ಲ !
ಚೆನ್ನೈ, ಡಿ.6: ತಮಿಳುನಾಡಿನಲ್ಲಿ ಜಯಲಲಿತಾ ಯುಗ ಅಂತ್ಯವಾಗಿದೆ.ಆದರೆ ಕೋಟ್ಯಂತರ ಜನರ ಪ್ರೀತಿಯ ಅಮ್ಮನಾಗಿದ್ದ ಜಯಲಲಿತಾ ಅವರ ಕೊನೆಗಳಿಗೆಯಲ್ಲಿ ಅವರ ಕುಟುಂಬದ ಒಬ್ಬನೇ ಒಬ್ಬ ಕುಟುಂಬ ಸದಸ್ಯನೂ ಇರದೇ ಇದ್ದಿದ್ದು ವಿಪರ್ಯಾಸವೇ ಸರಿ.
ಅವರು ಎರಡು ತಿಂಗಳುಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದಾಗಲೂ ಅವರ ಕುಟುಂಬದ ಯಾವುದೇ ಸದಸ್ಯರು ಅವರನ್ನು ಕಾಣಲು ಬಂದಿರಲಿಲ್ಲ. ಜಯಲಲಿತಾ ಅವರ ಸೋದರ ಜಯಕುಮಾರ್ ಅವರ ಪುತ್ರಿ ದೀಪಾ ಆಸ್ಪತ್ರೆಗೆ ಭೇಟಿ ನೀಡಲು ಯತ್ನಿಸಿದ್ದರೂ ಪೊಲೀಸರು ಅವರನ್ನು ಹಿಂದಕ್ಕೆ ಕಳುಹಿಸಿದ್ದರು. ಅವರು ತಮ್ಮ ಗುರುತನ್ನು ಪೊಲೀಸರಿಗೆ ಹೇಳಿದ ಹೊರತಾಗಿಯೂ ಪೊಲೀಸರು ‘ನಾವು ನಿಮ್ಮನ್ನು ಮತ್ತೆಸಂಪರ್ಕಿಸುತ್ತೇವೆ’’ ಎಂದು ಹೇಳಿದರೇ ವಿನಹ ಮತ್ತೆ ಅವರನ್ನು ಭೇಟಿಯಾಗಲು ಬಿಟ್ಟಿಲ್ಲ.
ಅಕ್ಟೋಬರ್ 2014ರಲ್ಲಿ ಜಯಲಲಿತಾ ಅವರು ಬಂಧನದಿಂದ ಬಿಡುಗಡೆಯಾದಾಗಲೂ ದೀಪಾ ಮತ್ತವರ ಪತಿ ಮಾಧವನ್ ಅವರು ಜಯಲಲಿತಾ ಅವರನ್ನು ಭೇಟಿಯಾಗಲು ಯತ್ನಿಸಿದ್ದರು. ಅವರು ಎಐಎಡಿಎಂಕೆ ಸಮರ್ಥಕರೊಂದಿಗೆ ಮಳೆಯಲ್ಲೂ ನಿಂತುಕೊಂಡು ಜಯಲಲಿತಾ ಅವರನ್ನು ಸ್ವಾಗತಿಸಲು ಕಾದು ನಿಂತಿದ್ದರು. ಮುಂದೆ ಜಯಲಲಿತಾ ನಿವಾಸದ ಬಳಿ ಅವರಿಬ್ಬರು ಬಹಳ ಹೊತ್ತು ಕಾದಿದ್ದರೂ ಅವರನ್ನು ಭೇಟಿಯಾಗುವ ಅವಕಾಶ ದೊರೆತಿರಲಿಲ್ಲ.
ಜಯಲಲಿತಾ ತಮ್ಮ ಬಾಲ್ಯವನ್ನು ಕರ್ನಾಟಕದ ಮೈಸೂರಿನಲ್ಲಿ ತಮ್ಮ ಅಜ್ಜ-ಅಜ್ಜಿಯರೊಂದಿಗೆ ಕಳೆದಿದ್ದರು. ನಂತರ ಅವರು ಚೆನ್ನೈಗೆ ವಾಸ ಬದಲಾಯಿಸಿದ್ದರೂ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು. ಆದರೆ 1995ರಲ್ಲಿ ಅವರ ದತ್ತು ಪುತ್ರ ಸುಧಾಕರನ್ ವಿವಾಹದ ನಂತರ ಅವರು ತಮ್ಮ ಕುಟುಂಬದೊಂದಿಗಿನ ಸಂಪರ್ಕ ಕಡಿದುಕೊಂಡು ಬಿಟ್ಟಿದ್ದರು.
ಜಯಾ ಅವರ ತಾಯಿ ವೇದಾ ನೆಲ್ಲೂರಿನವರು. ಆವರು ಮೈಸೂರು ಮಹಾರಾಜರ ಸರ್ಜನ್ ಆಗಿದ್ದ ಜಯರಾಮನ್ ಅವರನ್ನು ವಿವಾಹವಾಗಿದ್ದರು. ಜಯಲಲಿತಾ ಅವರು ತಮ್ಮ ಮಾವ ಶ್ರೀನಿವಾಸನ್ ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಅವರನ್ನು ಆಕೆ 'ಚೀನೀ ಮಾಮ' ಎಂದು ಕರೆಯುತ್ತಿದ್ದರು. ಅವರ ತಾಯಿಯ ಹಿರಿಯ ಸಹೋದರಿ ವಿದ್ಯಾವತಿ ಬೆಂಗಳೂರಿನಲ್ಲಿ ಅಶಕ್ತರಿಗಾಗಿ ಶಾಲೆಯೊಂದನ್ನು ನಡೆಸುತ್ತಿದ್ದರು. ಅವರೊಬ್ಬ ನಟ ಕೂಡ ಆಗಿದ್ದರು. ಅವರ ಪುತ್ರಿಯರಾದ ಅಮಿತಾ ಹಾಗೂ ಜಯಂತಿ ಆಸ್ಟ್ರೇಲಿಯಾ ಮತ್ತು ಅಮೆರಿಕಾದಲ್ಲಿದ್ದಾರೆ. ವೇದಾ ಅವರ ಇನ್ನೊಬ್ಬರು ಸಹೋದರ ಹಾಗೂ ಆಕೆಯ ಪತಿ ಕಣ್ಣನ್ ಅವರಿಗೆ ಮಕ್ಕಳಿಲ್ಲ. ಅವರು ಹಲವು ವರ್ಷಗಳ ಕಾಲ ಜಯಲಲಿತಾ ಜತೆ ವಾಸವಾಗಿದ್ದರು. ವೇದಾ ಅವರ ಕಿರಿಯ ಸಹೋದರಿ ಪದ್ಮಿನಿ ಬೆಂಗಳೂರಿನಲ್ಲಿ ವಾಸವಾಗಿದ್ದರು ಹಾಗೂ 2011ರಲ್ಲಿ ನಿಧನ ಹೊಂದಿದ್ದರು. ನವೆಂಬರ್ 2012ರಲ್ಲಿ ದೀಪಾ ವಿವಾಹವಾಗಿದ್ದಾಗ ಕೆಲ ಸಂಬಂಧಿಕರು ಬಂದಿದ್ದರೂ ಜಯಲಲಿತಾ ಮಾತ್ರ ಬಂದಿರಲಿಲ್ಲ ಎಂದು ದೀಪಾ ನೆನಪಿಸಿಕೊಂಡಿದ್ದಾರೆ.